Home ಜಿಲ್ಲೆ ಮೈಸೂರು ಗ್ರೀನ್ ಬಡ್ರ್ಸ್ ಆಗ್ರೋ ಠೇವಣಿದಾರರಿಗೆ ನ್ಯಾಯ ಕೊಡುವಂತೆ ಕುರುಬೂರು ಶಾಂತಕುಮಾರ್ ಆಗ್ರಹ

ಗ್ರೀನ್ ಬಡ್ರ್ಸ್ ಆಗ್ರೋ ಠೇವಣಿದಾರರಿಗೆ ನ್ಯಾಯ ಕೊಡುವಂತೆ ಕುರುಬೂರು ಶಾಂತಕುಮಾರ್ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಏ.13:-
ಗ್ರೀನ್ ಬಡ್ರ್ಸ್ ಆಗ್ರೋ ಪಾರಂ ಠೇವಣಿದಾರರಿಗೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಗ್ರೀನ್ ಬಡ್ರ್ಸ್ ಆಗ್ರೋ ಫಾರಂನಿಂದ ವಂಚನೆಗೆ ಒಳಗಾದವರ ಸಭೆ ನಡೆಸಿ ಮಾತನಾಡಿದ ಅವರು, ಗ್ರೀನ್ ಬಡ್ರ್ಸ್ ಆಗ್ರೋ ಪಾರಂ ಕಂಪನಿ ವಂಚನೆಗೆ ಒಳಗಾದ ಠೇವಣಿದಾರರಿಗೆ ಶೀಘ್ರ ಹಣ ಕೊಡಿಸುವಂತೆ ಒತ್ತಾಯಿಸಿ ಬೆಂಗಳೂರಿನ ವಿ ವಿ ಟವರ್ ನಲ್ಲಿರುವ ಸಕ್ಷಮ ಪ್ರಾಧಿಕಾರದ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಬೆಲೆಬಾಳುವ ಆಸ್ತಿಯನ್ನು ವಶ ಪಡಿಸಿಕೊಂಡಿದ್ದು ಗ್ರೀನ್ ಬಡ್ರ್ಸ್ ಕಂಪನಿಗೆ ಸೇರಿದ ಆಸ್ತಿಗಳನ್ನು ಹರಾಜು ಮಾಡಿದ್ದರು ಸಹ ವಂಚಿತ ಠೇವಣಿದಾರರಿಗೆ ಹಣ ನೀಡುವಲ್ಲಿ ವಿಫಲವಾಗಿದ್ದು ಇದಕ್ಕೆ ಸಂಬಂಧಿಸಿದಂತಹ ಅಧಿಕಾರಿಗಳು ಹಾಗೂ ವಿಶೇಷ ಸಕ್ಷಮ ಪ್ರಾಧಿಕಾರ ಬೆಂಗಳೂರು ಕಚೇರಿಯು ಆಸ್ತಿಯ ಹರಾಜು ಪ್ರಕ್ರಿಯೆಯನ್ನು ಮುಕ್ತಾಯ ಗೊಳಿಸದೆ ವಿಳಂಬ ವಾಗುತ್ತಿದ್ದು ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಿದ ನಂತರವೇ ವಂಚಿತ ಠೇವಣಿದಾರರಿಗೆ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ಈ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಠೇವಣಿದಾರರ ರಕ್ಷಣಾ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ, ಗ್ರೀನ್ ಬಡ್ರ್ಸ್ ಆಗ್ರೋ ಫಾರಂ ಲಿಮಿಟೆಡ್ ಕಂಪನಿಗೆ ರಾಜ್ಯಾದ್ಯಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬಡವರು, ಬಡ ರೈತ ಮಹಿಳೆಯರು, ಕೂಲಿ ಕಾರ್ಮಿಕರು, 150 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದು 2013 ರಲ್ಲಿ ಠೇವಣಿದಾರಿಗೆ ಹಣ ನೀಡದೆ ವಂಚನೆ ಮಾಡಿದ ಕಾರಣ ರಾಜ್ಯಾದ್ಯಂತ ಇರುವ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ದಿಕ್ಕು ತೋಚದೆ ಸಂಕಟದಲ್ಲಿದ್ದಾಗ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಪ್ರೀಡಂ ಪಾರ್ಕ್) ಪ್ರತಿಭಟನೆ ಮಾಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈವರೆಗೂ ನ್ಯಾಯಸಿಗದ ಹಿನ್ನೆಲೆಯಲ್ಲಿ 16 ಜಿಲ್ಲೆಗಳಿಗೂ ಹೆಚ್ಚು ಕಾರ್ಯಕರ್ತರು ಹಾಗೂ ಠೇವಣಿದಾರರು ಬೆಂಗಳೂರಿನ ವಿವಿ ಟವರ್ ನಲ್ಲಿರುವ ವಿಶೇಷ ಸಕ್ಷಮ ಪ್ರಾಧಿಕಾರದ ಕಚೇರಿ ಮುಂದೆ ಠೇವಣಿದಾರರಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಠೇವಣಿದಾರರ ಹೋರಾಟ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್,ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್, ಸಮಿತಿಯ ಮುಖಂಡರಾದ ಪೂರ ಜಗದೀಶ್, ಚಿಕ್ಕನಾಯಕ, ನಂಜನಗೂಡು ಶಿವಕುಮಾರ್, ತಗಡೂರು ಮಾದೇವಪ್ಪ, ಟಿ.ನರಸೀಪುರ ರೂಪಾ, ಸಿದ್ದರಾಜು, ಚಾಮರಾಜನಗರ ಷಡಕ್ಷರಿ, ಶ್ರೀಕಂಠ, ಹುಣಸೂರು ನಂದನ್, ಕೆ.ಆರ್.ನಗರ ಹೇಮೇಶ್, ಮಂಡ್ಯ ಮಂಜುನಾಥ್, ಚನ್ನಪಟ್ಟಣ ಬಸವರಾಜ್, ಕೋಲಾರ ಅಶೋಕ್, ಮಾಲೂರು ರಾಜಯ್ಯಶೆಟ್ಟಿ, ಗಿರೀಶ್, ಮಳವಳ್ಳಿ ರಾಜೇಶ್, ವೆಂಕಟೇಶ್, ಕೊಳ್ಳೇಗಾಲ ಬಸಮ್ಮ, ಸಂತೋಷ್ ಇತರರು ಭಾಗವಹಿಸಿದ್ದರು.