
ಸಂಜೆವಾಣಿ ನ್ಯೂಸ್
ಮೈಸೂರು: ಏ.13:- ನ್ಯಾಯಯುತ ಮತ್ತು ನ್ಯಾಯಬೆಲೆಯ ವ್ಯಾಪಾರಿ ಮನೋಧರ್ಮವು ನಮ್ಮ ದೇಶದ ವ್ಯಾಪಾರ ವಹಿವಾಟುಗಳಲ್ಲಿ ಅಂತರ್ಗತವಾಗಿ ಹೆಚ್ಚಾಗಬೇಕಿದೆ. ಇದರ ಜೊತೆಗೆ ಕಳಪೆ ಸಾಮಗ್ರಿ ಕೊಳ್ಳುವ, ನಿಗದಿತ ಬೆಲೆಗಿಂತ ಹೆಚ್ಚು ಬೆಲೆ ತೆತ್ತು ಮೋಸಹೊಗುವ ಗ್ರಾಹಕರ ಹಕ್ಕುಗಳನ್ನು ನಮ್ಮ ನ್ಯಾಯಮಂಡಳಿಗಳು ಇನ್ನಾದರೂ ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ, ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ ಹೇಳಿದರು.
ವಿದ್ಯಾವರ್ಧಕ ಕಾನೂನು ಕಾಲೇಜು ಆಯೋಜಿಸಿದ್ದ ಮೈಸೂರಿನ ಹಿರಿಯ ಮುತ್ಸದ್ಧಿ ಕೆ.ಪುಟ್ಟಸ್ವಾಮಿಯವರ ನೆನಪಿನ 7ನೇ ದತ್ತಿ ಉಪನ್ಯಾಸಮಾಲೆ ಭಾರತದಲ್ಲಿ ಗ್ರಾಹಕೀಕರಣ -ಗ್ರಾಹಕರ ರಕ್ಷಣೆ ಮತ್ತು ಗ್ರಾಹಕರ ಹಿತರಕ್ಷಣಾ ವಕೀಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಾಪಾರಿ ಮತ್ತು ಖರೀದಿದಾರರ ನಡುವಿನ ಸಂಬಂಧ ಬರಿಯ ಕೊಡುಕೊಳ್ಳುವಿಕೆಯ ಸಂಬಂಧ ಮಾತ್ರವಲ್ಲ. ಅಗಲೆಂದು ನಂಬಿಕೆ, ವಿಶ್ವಾಸವಿರುತ್ತದೆ. ತಾನು ಕೊಂಡ ವಸ್ತುಗಳು ನನ್ನನ್ನು ಮೋಸಹೋಗುವಂತೆ ಮಾಡಿಲ್ಲ ಎಂಬ ವಿಶ್ವಾಸವೇ ಗ್ರಾಹನಿಗೆ ವ್ಯಾಪಾರಿಯ ಮೇಲೆ ವಿಶ್ವಾಸವಿಡುವಂತೆ ಮಾಡುವುದು ಎಂದು ಅವರು ಚಂದದ ಮನೆಗೊಂದು ಕಾರು ಎಂಬ ಕಾಲ ಹೋಯಿತು. ಈಗೇನಿದ್ದರೂ ನನಗೊಂದು, ನನ್ನ ಹೆಂಡತಿಗೊಂದು ಮತ್ತು ಮಕ್ಕಳಿಗೊಂದು ಕಾರು ಬೇಕು ಅನ್ನುವ ಕೊಳ್ಳುಬಾಕತನದ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ. ನಮ್ಮಲ್ಲಿ ಈ ಕೊಳ್ಳುಬಾಕತನದ ಒತ್ತಡವನ್ನು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಉಂಟುಮಾಡಿದೆ ಎಂದರು.
ಕಾಲಿಗೆ, ಮೆದುಳಿಗೆ, ದೇಹಕ್ಕೆ ಕೆಲಸ ಕೊಡದ ನಾವು ಈಗ ನಮ್ಮ ದೇಹದ ಒಂದೊಂದು ಅಂಗಕ್ಕೂ ಒಂದೊಂದು ಸಲಕರಣೆ ಬೇಕು ಅನ್ನುವ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ನಮ್ಮಲ್ಲಿರುವ ಇಂಥ ಕೊಳ್ಳುಬಾಕತನವೇ ಗ್ರಾಹಕ ಸಂಸ್ಕೃತಿಯಾಗಿ ನಿತ್ಯವೂ ಬೆಳೆಯುತ್ತಾ, ವ್ಯಾಪಾರಿ ಸ್ವರೂಪದ ಧೋರಣೆಗಳು ದ್ರೋಹ ವಂಚನೆಗಳಾಗಿ ಬದಲಾಗುತ್ತಾ ಮತ್ತವು ಪ್ರತಿನಿತ್ಯವು ಹೆಚ್ಚಾಗುತ್ತಾ ಗ್ರಾಹಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ವಹಿಸಿದ್ದರು. ಕೆ.ಪುಟ್ಟಸ್ವಾಮಿಯವರ ಹಿರಿಯ ಪುತ್ರ ಡಾ.ಪಿ.ಚಂದ್ರಶೇಖರ್ ಮತ್ತು ಮತ್ತೊಬ್ಬ ಪುತ್ರರು ಹಾಗೂ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇಂಜಿನಿಯರ್ ಪಿ.ವಿಶ್ವನಾಥ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಎಸï. ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ದೀಪು, ಕಾರ್ಯಕ್ರಮದ ಸಂಯೋಜಕ ಎಚ್.ಎಸ್.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಎಂ.ಜೆ.ಇಂದುಮತಿ ಇನ್ನಿತರರು ಉಪಸ್ಥಿತರಿದ್ದರು.
























