Home ಜಿಲ್ಲೆ ಮೈಸೂರು ಕಾನೂನಿನ ಅಜ್ಞಾನ ಅಪರಾಧದಿಂದ ಮುಕ್ತಿ ನೀಡಲ್ಲ

ಕಾನೂನಿನ ಅಜ್ಞಾನ ಅಪರಾಧದಿಂದ ಮುಕ್ತಿ ನೀಡಲ್ಲ

ಸಂಜೆವಾಣಿ ನ್ಯೂಸ್
ಮೈಸೂರು.ಆ.05:
ಕಾನೂನಿನ ಬಗ್ಗೆ ಅರಿವಿಲ್ಲದಿರುವುದು ಅಥವಾ ಮಾಹಿತಿ ಇಲ್ಲದಿರುವುದು ಅಪರಾಧ ಅಥವಾ ತಪ್ಪಿನಿಂದ ಯಾವುದೇ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಹಾಗೂ ವಿದ್ಯಾರ್ಥಿಗಳು ದೇಶದ ಕಾನೂನುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ ಹೇಳಿದರು.


ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಹಾಗೂ ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ `ಪೆÇೀಕ್ಸೋ ಕಾಯ್ದೆ, ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವುದು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006′ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ನಮ್ಮ ದೇಶದಲ್ಲಿ ಸಾವಿರಾರು ಕಾನೂನುಗಳಿವೆ. ಪ್ರತಿಯೊಂದು ಕಾನೂನಿನ ಜ್ಞಾನ ಎಲ್ಲರಿಗೂ ಇರಲು ಸಾಧ್ಯವಿಲ್ಲದಿದ್ದರೂ, ದೈನಂದಿನ ಜೀವನಕ್ಕೆ ಹಾಗೂ ಸಮಾಜಕ್ಕೆ ಅಗತ್ಯವಿರುವ ಮೂಲಭೂತ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಿರಬೇಕು. ಕಾನೂನಿನ ಅರಿವು ಕೇವಲ ಅನಕ್ಷರಸ್ಥರಿಗೆ ಮಾತ್ರವಲ್ಲದೆ, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‍ಗಳು ಸೇರಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿದೆ ಎಂದರು.


ಕಾನೂನಿನ ಪ್ರಕಾರ ಕಾನೂನಿನ ಅಜ್ಞಾನ ಸಮರ್ಥನೆಯಲ್ಲ. ಕಾನೂನು ಗೊತ್ತಿರಲಿಲ್ಲ ಎಂಬ ಕಾರಣಕ್ಕೆ ಮಾಡಿದ ತಪ್ಪಿಗೆ ಅಥವಾ ಅಪರಾಧಕ್ಕೆ ಶಿಕ್ಷೆಯಿಂದ ವಿನಾಯಿತಿ ಸಿಗುವುದಿಲ್ಲ. ನಾವು ಮತ್ತೊಬ್ಬರ ಹಕ್ಕನ್ನು ಉಲ್ಲಂಘಿಸಿದಾಗ ಕಾನೂನಿನ ತೊಡಕುಗಳು ಎದುರಾಗುತ್ತವೆ ಎಂದು ತಿಳಿಸಿದರು.
ವಾಹನ ಚಾಲನೆ ಕಲಿಯುವುದು ಮುಖ್ಯ. ಆದರೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಚಾಲನಾ ಪರವಾನಗಿ, ವಾಹನ ನೋಂದಣಿ, ವಿಮೆ ಹಾಗೂ ಹೆಲ್ಮೆಟ್ ಧರಿಸುವುದು ಸೇರಿದಂತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಡ್ರಗ್ಸ್ ಜಾಲದ ವಿರುದ್ಧ ಹೋರಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಸಂತ್ರಸ್ತರನ್ನು ಅಪರಾಧಿಗಳನ್ನಾಗಿ ನೋಡದೆ ಅವರನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು. ಯಾರಾದರೂ ಡ್ರಗ್ಸ್ ಮಾರಾಟ ಮಾಡುತ್ತಿದ್ದರೆ ಅಥವಾ ಸೇವಿಸುತ್ತಿದ್ದರೆ ತಕ್ಷಣ ಉಚಿತ ನಾರ್ಕೋಟಿಕ್ಸ್ ಹೆಲ್ಪ್‍ಲೈನ್ ಸಂಖ್ಯೆ 1933 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 8,000ಕ್ಕೂ ಹೆಚ್ಚು ಪೆÇೀಕ್ಸೋ ಪ್ರಕರಣಗಳು ಬಾಕಿ ಇವೆ. ಪೆÇೀಕ್ಸೋ ವಿಶೇಷ ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಜಾಮೀನು ರಹಿತ ಹಾಗೂ ಕಠಿಣ ಶಿಕ್ಷೆ ಅಂದರೆ 10, 20 ಅಥವಾ 30 ವರ್ಷಗಳ ಜೈಲು ಶಿಕ್ಷೆ ನೀಡುವ ಅಪರಾಧವಾಗಿದೆ ಎಂದು ತಿಳಿಸಿದರು.


ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ. ಸಮೀಕ್ಷೆಯೊಂದರ ಪ್ರಕಾರ ಶೇಕಡಾ 43ರಷ್ಟು ಗಂಡು ಮಕ್ಕಳ ಮೇಲೆಯೂ ನಡೆಯುತ್ತಿದೆ. ಆದರೆ ಹಲವು ಕಾರಣಗಳಿಂದ ಅವು ಬೆಳಕಿಗೆ ಬರುತ್ತಿಲ್ಲ ಎಂದರು. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಜಾಗೃತಿ ಹೊಂದಿರಬೇಕು. ಸ್ವಂತ ಶರೀರವು ಪ್ರತಿಯೊಬ್ಬರ ಹಕ್ಕು ಹಾಗೂ ಆಸ್ತಿಯಾಗಿದ್ದು, ಯಾರಾದರೂ ಉಲ್ಲಂಘಿಸಲು ಬಂದರೆ ಧೈರ್ಯವಾಗಿ ವಿರೋಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಉಪ ಕಾರ್ಯದರ್ಶಿಗಳಾದ ಶ್ರೀಧರ್ ಎಂ, ಕೆ. ಮಧುಸೂಧನ್ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.