
‘ನೀ ನಂಗೆ ಅಲ್ಲವಾ’ ಟ್ರೇಲರ್ಗೆ ಮೆಚ್ಚುಗೆ
ನವೆಂಬರ್ 13ರಂದು ರಾಜ್ಯಾದ್ಯಂತ ತೆರೆಗೆ
ಕನ್ನಡ ಚಿತ್ರರಂಗದ ಆರು ಖ್ಯಾತ ನಿರ್ದೇಶಕರ ಉಪಸ್ಥಿತಿ ಹಾಗೂ ಮೆಚ್ಚುಗೆಯೊಂದಿಗೆ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ವಿಭಿನ್ನ ಕಥಾಹಂದರದ ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ನಿರ್ದೇಶಕರಿಂದ ದೊರೆತ ಪ್ರೋತ್ಸಾಹ ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಜಯರಾಮ್ ದೇವಸಮುದ್ರ ನಿರ್ಮಾಣದಲ್ಲಿ, ಮನೋಜ್ ಪಿ. ನಡಲಮನೆ ನಿರ್ದೇಶನದ ಈ ಚಿತ್ರದ ಟ್ರೇಲರ್ ಅನ್ನು ಶಶಾಂಕ್, ಪವನ್ ಒಡೆಯರ್, ಬಹದ್ದೂರ್ ಚೇತನ್, ಮಹೇಶ್ ಕುಮಾರ್, ರೋಹಿತ್ ಪದಕಿ ಹಾಗೂ ಗುರುದತ್ ಗಾಣಿಗ ಬಿಡುಗಡೆ ಮಾಡಿದರು. ‘ಪ್ರೇಮದ ಊರಲಿ’ ಚಿತ್ರದ ನಿರ್ಮಾಪಕ ದೇವೇಂದ್ರ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟ್ರೇಲರ್ ವೀಕ್ಷಿಸಿದ ನಿರ್ದೇಶಕರು ಕಥೆ, ನಿರೂಪಣೆ, ಸಂಗೀತ ಹಾಗೂ ಛಾಯಾಗ್ರಹಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಹೊಸ ಪ್ರತಿಭೆಗಳ ಕನಸುಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಚಿತ್ರ ನಿರ್ಮಿಸಿರುವುದಾಗಿ ನಿರ್ಮಾಪಕ ಜಯರಾಮ್ ದೇವಸಮುದ್ರ ತಿಳಿಸಿದರು. ಚಿತ್ರರಂಗದ ಗಣ್ಯರಿಂದ ದೊರೆತ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ನಿರ್ದೇಶಕ ಮನೋಜ್ ಪಿ. ನಡಲಮನೆ ಮಾತನಾಡಿ, ತಂಡ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಟ್ರೇಲರ್ ಇಷ್ಟವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ನಾಯಕ ರಾಹುಲ್ ಆರ್ಕಾಟ್ಗೆ ಇದು ಮೊದಲ ಚಿತ್ರ. ಸುಮಾರು ಮೂರೂವರೆ ವರ್ಷಗಳ ಪಯಣದಲ್ಲಿ ಹಲವು ಸವಾಲುಗಳನ್ನು ಎದುರಿಸಿ ಸಿನಿಮಾ ಪೂರ್ಣಗೊಳಿಸಿರುವುದಾಗಿ ಅವರು ತಿಳಿಸಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ನಾಯಕಿ ಕಾಶಿಮಾ, ‘ಖುಷಿ’ ಪಾತ್ರದಲ್ಲಿ ನಗು, ಅಳು, ನೋವು, ಸಂತೋಷ ಸೇರಿದಂತೆ ಹಲವು ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ಸಿಕ್ಕಿದೆ ಎಂದರು. ಮಹಿಳೆಯರು ಎದುರಿಸುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಚಿತ್ರದಲ್ಲಿ ನೈಜವಾಗಿ ಚಿತ್ರಿಸಲಾಗಿದೆ ಎಂದು ಹೇಳಿದರು. ನಾಯಕನ ತಂದೆಯ ಪಾತ್ರದಲ್ಲಿ ನಟಿಸಿರುವ ಮಂಜುನಾಥ ಹೆಗಡೆ ನಿರ್ದೇಶಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸಂಗೀತ ನಿರ್ದೇಶಕ ಸೂರಜ್ ದೇಸಾಯಿ, ಛಾಯಾಗ್ರಾಹಕ ಉದಯ್ ಲೀಲಾ ಹಾಗೂ ಸೌಂಡ್ ಎಂಜಿನಿಯರ್ ನವೀನ್ ಕುಮಾರ್ ತಮ್ಮ ಅನುಭವ ಹಂಚಿಕೊಂಡರು.
ಚಿತ್ರ ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.




















