
ಕಲಬುರಗಿ,ಮೇ.೪-ನಗರದಲ್ಲಿ ಸುಲ್ತಾನ್-ಎ-ದಕ್ಕನ್ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಅವರ ೬೨೨ನೇ ಉರ್ಸ್ ಶರೀಫ್ ಅಂಗವಾಗಿ ನಡೆದ ಜುಲೂಸ್-ಎ-ಸಂದಲ್ ಮುಬಾರಕ್ ಅತ್ಯಂತ ಭಕ್ತಿಭಾವ ಮತ್ತು ಗೌರವದೊಂದಿಗೆ ಭವ್ಯವಾಗಿ ಆರಂಭವಾಯಿತು.
ಭಾನುವಾರ, ಉರ್ಸ್ ಶರೀಫ್ ಕಾರ್ಯಕ್ರಮಗಳು ಅಧಿಕೃತವಾಗಿ ಪ್ರಾರಂಭವಾದವು. ಹಜರತ್ ಸಜ್ಜಾದಾ ನಶೀನ್ ಡಾ. ಹಾಫಿಜ್ ಸಯ್ಯದ್ ಮಹಮ್ಮದ್ ಅಲಿ ಅಲ್ ಹುಸೈನೀ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ನಮಾಝ್-ಎ-ಅಸರ್ ಅನ್ನು ಮೌಲಾನಾ ಅಬ್ದುಲ್ ರಶೀದ್ ಸಾಹೇಬ್ ನೆರವೇರಿಸಿದರು.
ನಂತರ ಮೆಹ್ಫಿಲ್-ಎ-ಸಮಾ ಕಾರ್ಯಕ್ರಮ ಆಯೋಜಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕವ್ವಾಲರು ಭಾಗವಹಿಸಿ ಭಕ್ತಿಗೀತೆಗಳ ಮೂಲಕ ಮುಬಾರಕ್ಬಾದಿ ಸಲ್ಲಿಸಿದರು.
ಮೆಹ್ಫಿಲ್-ಎ-ಸಮಾ ನಂತರ, ಸಂಜೆ ೬:೧೫ಕ್ಕೆ ಸಜ್ಜಾದಾ ನಶೀನ್ ಡಾ.ಸಯ್ಯದ್ ಮಹಮ್ಮದ್ ಅಲಿ ಅಲ್ ಹುಸೈನೀ ಸಾಹೇಬ್ ಅವರು ಸಂದಲ್ ಮುಬಾರಕ್ನ ಕಷ್ಟಿಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಜುಲೂಸ್ ಅನ್ನು ಆರಂಭಿಸಿದರು.
ಜುಲೂಸ್-ಎ-ಸAದಲ್ ಮಹಬೂಬ್ ಗುಲ್ಶನ್ನಿಂದ ಪ್ರಾರಂಭವಾಗಿ ದರ್ಗಾಹ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಕಡೆಗೆ ಹೊರಟಿತು. ಜುಲೂಸ್ ಮುಂಚೆ ರಿಫಾಈ ಫುಕ್ರಾಗಳ ದಂಡು ಸಾಗುತ್ತಿದ್ದು, ಅವರ ಭಾವಪೂರ್ಣ ಆಧ್ಯಾತ್ಮಿಕ ಪ್ರದರ್ಶನಗಳು ಜನರ ಗಮನ ಸೆಳೆದವು.
ಈ ಜುಲೂಸ್ ಸೂಪರ್ ಮಾರ್ಕೆಟ್, ಚೌಕ್, ಮಾರ್ಕೆಟ್ ಮಸೀದಿ ಮಾರ್ಗವಾಗಿ ಸಾಗಿತು, ಅಲ್ಲಿ ಮಘ್ರಿಬ್ ನಮಾಝ್ ನೆರವೇರಿಸಲಾಯಿತು. ನಂತರ ಸರಾಫ್ ಬಜಾರ್, ಚೌಕ್ ಮಸೀದಿ, ಬಹಮನಿ ಚೌಕ್, ನ್ಯಾಷನಲ್ ಚೌಕ್ ಮಾರ್ಗವಾಗಿ ಗ್ಯಾರಹ್ ಸೀಢಿ ಕಡೆಗೆ ಮುಂದುವರಿಯಿತು.
ಕಾರ್ಯಕ್ರಮದ ಪ್ರಕಾರ, ಜುಲೂಸ್ ರಾತ್ರಿ ೧೦:೩೦ಕ್ಕೆ ಗ್ಯಾರಹ್ ಸೀಢಿ ತಲುಪಲಿದೆ, ಅಲ್ಲಿ ಸಂದಲ್ ಮುಬಾರಕ್ಗೆ ಸಜ್ಜಾದಾ ನಶೀನ್ ಸ್ವತಃ ಸ್ವಾಗತ ಕೋರಲಿದ್ದಾರೆ.
ಈ ಸಂದರ್ಭದಲ್ಲಿ ಡಾ. ಸಯ್ಯದ್ ಮುಸ್ತಫಾ ಅಲ್ ಹುಸೈನೀ ಸಾಹೇಬ್, ಸಯ್ಯದ್ ಮಹಮ್ಮದ್ ಸಯ್ಯದ್ ಹುಸೈನೀ ಸಾಹೇಬ್ (ಸಜ್ಜಾದಾ ನಶೀನ್ ಅವರ ಹಿರಿಯ ಪುತ್ರ), ಸಯ್ಯದ್ ಶಾ ಸಫಿಯುಲ್ಲಾ ಹುಸೈನೀ, ಸಯ್ಯದ್ ಶಾ ರಹೀಮುಲ್ಲಾ ಹುಸೈನೀ, ಸಯ್ಯದ್ ಶಾ ಹಸನ್ ಶಬ್ಬೀರ್ ಹುಸೈನೀ (ರೋಜಾ-ಎ-ಖುರ್ಡ್ ಸಜ್ಜಾದಾ ನಶೀನ್), ಸಯ್ಯದ್ ಶಾ ತುಕಿಲ್ಲಾ ಹುಸೈನೀ, ಸಯ್ಯದ್ ಅಹ್ಮದ್ ಹುಸೈನೀ, ಸಯ್ಯದ್ ಮುರ್ತಜಾ ಹುಸೈನೀ, ಸಯ್ಯದ್ ಅಕೀಬ್ ಹುಸೈನೀ ಸೇರಿದಂತೆ ಬಂದಾ ನವಾಜ್ ಖಾಂದಾನದ ಸದಸ್ಯರು ಹಾಜರಿದ್ದರು.
ಇದಲ್ಲದೆ ಸಜ್ಜಾದ್ಗಾನ್, ಮಶಾಯಿಖ್-ಎ-ಇಜಾಮ್, ಉಲಮಾ-ಎ-ಕಿರಾಮ್ ಹಾಗೂ ಸಾವಿರಾರು ಭಕ್ತರು ಮತ್ತು ಜಾಯರೀನ್ಗಳ ಭವ್ಯ ಉಪಸ್ಥಿತಿಯಿಂದ ನಗರದೆಲ್ಲೆಡೆ ಐತಿಹಾಸಿಕ ರಸ್ತೆಗಳ ಮೇಲೆ ಆತ್ಮೀಯ ಮತ್ತು ಆಧ್ಯಾತ್ಮಿಕ ವಾತಾವರಣ ಕಂಡುಬAತು.






















