
ಪುತ್ತೂರು; ಹಿಂದೂ ಜಾಗರಣ ವೇದಿಕೆ ದರ್ಬೆ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಬಂದ್ ಕರೆಗೆ ಸಾರ್ವತ್ರಿಕ ರಜಾ ದಿನ ಹಾಗೂ ಈದ್ಮಿಲಾದ್ ಹಬ್ಬದ ಸಹಕಾರ ಉತ್ತಮ ಬೆಂಬಲ ನೀಡಿದ ಪರಿಣಾಮ ಮಂಗಳವಾರ ಪುತ್ತೂರು ನಗರವಿಡೀ ಬಂದ್ ಆಚರಿಸಿತು.

ದರ್ಬೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲೇ ತೆರೆಯಲಿಲ್ಲ. ಈ ನಡುವೆ ಈದ್ ಮಿಲಾದ್ ಹಬ್ಬದ ಕಾರಣ ಮುಸ್ಲಿಂ ಸಮುದಾಯ ತಮ್ಮ ಅಂಗಡಿಗಳ ವ್ಯಾಪಾರ-ವಹಿವಾಟುಗಳಿಗೆ ರಜಾ ಘೋಷಿಸಿದ್ದರು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಘೋಷಣೆ ಮಾಡಿದ ಸಾರ್ವತ್ರಿಕ ರಜೆ ಬಂದ್ ಗೆ ಬೆಂಬಲ ಸೂಚಿಸಿತು. ಹಾಗಾಗಿ ಪುತ್ತೂರು ನಗರದಲ್ಲಿ ಅತ್ಯಂತ ವಿರಳ ಜನಸಂಖ್ಯೆ ಕಂಡು ಬಂತು. ಖಾಸಗಿ ವಾಹನಗಳು ಹಾಗೂ ಸರ್ಕಾರಿ ಬಸ್ಗಳ ಓಡಾಟಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಅಟೋ ರಿಕ್ಷಾಗಳ ಓಡಾಟವೂ ಎಂದಿನಂತಿರದೆ ವಿರಳವಾಗಿತ್ತು.
ಬೆಳಿಗ್ಗೆ ನಗರದ ಕೆಲವು ಅಂಗಡಿ- ಹೋಟೇಲ್ ಗಳು ಎಂದಿನಂತೆ ತೆರೆದಿದ್ದವು. ಮಧ್ಯಾಹ್ನದ ಹೊತ್ತಿಗೆ ಜನರೇ ಇಲ್ಲದ ಕಾರಣ ಈ ಬಾಗಿಲು ತೆರೆದಿದ್ದ ಅಂಗಡಿ-ಹೋಟೆಲ್ ಗಳು ಕೂಡಾ ವ್ಯಾಪಾರ ವಹಿವಾಟು ನಿಲ್ಲಿಸಿ ತೆರೆದ ಬಾಗಿಲನ್ನು ಮುಚ್ಚಿದವು. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತಿತರ ವ್ಯವಸ್ಥೆಗಳು ಎಂದಿನಂತಿದ್ದವು.
ಬಿಗುಬಂದೋಬಸ್ತು..
ದರ್ಬೆ ಪ್ರಕರಣದ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ಬಂದ್ ಹಾಗೂ ಈದ್ ಮಿಲಾದ್ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಿಗುಬಂದೋಬಸ್ತು ಮಾಡಲಾಗಿತ್ತು. ಎಡಿಷನಲ್ ಎಸ್ಪಿ, ಡಿವೈಎಸ್ಪಿ, ೮ ಮಂದಿ ಪಿಎಸ್ಐ, ೧೦ ಮಂದಿ ಎಎಸ್ಐಗಳು ಹಾಗೂ ೫೦ ಮಂದಿ ಸಿಬ್ಬಂದಿಗಳನ್ನು ಆಯೋಜಿಸಲಾಗಿತ್ತು. ಇದರ ಜತೆಗೆ ೫ ಕೆಎಸ್ಆರ್ಪಿ ತುಕಡಿಗಳು, ೩ ಡಿಎಆರ್ ತುಕಡಿಗಳು ಮತ್ತು ೧ ಎಸ್ಎಫ್ ತುಕಡಿಯನ್ನು ಕಾನೂನು ಸುವ್ಯವಸ್ಥೆಗಾಗಿ ಆಯೋಜಿಸಲಾಗಿತ್ತು.
ಹೀಗೊಂದು ಮೆಸೇಜ್ ವೈರಲ್..
ಈದ್ ಮಿಲಾದ್ ಮುನ್ನಾ ದಿನವಾದ ಸೋಮವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಮೆಸೇಜ್ ವೈರಲ್ ಆಗುತ್ತಿದೆ. ಈದ್ ಮಿಲಾದ್ ಪ್ರಯುಕ್ತ ಪುತ್ತೂರಿನಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಿ ಮುಸ್ಲಿಂರ ಹಬ್ಬಕ್ಕೆ ಗೌರವ ನೀಡಿ ಸೌಹಾರ್ದತೆ ಮೆರೆದ ಹಿಂದೂ ಜಾಗರಣ ವೇದಿಕೆ ಎಂಬ ಪೋಸ್ಟರ್ ಚರ್ಚೆಗೆ ಗ್ರಾಸವಾಗಿದೆ.
ಬೃಹತ್ ಮಿಲಾದ್ ಸಮಾವೇಶ

ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ಪ್ರವಾದಿ ಅವರ ೧೫೦೧ನೇ ಜನ್ಮ ದಿನಾಚರಣೆ ಪ್ರಯುಕ್ತ ಪುತ್ತೂರಿನಲ್ಲಿ ೩೪ನೇ ವರ್ಷದ ಮಿಲಾದ್ ಸಮಾವೇಶದ ನಡೆಯಿತು. ಈ ಸಮಾವೇಶದ ಪ್ರಯುಕ್ತ ದರ್ಬೆಯಿಂದ ಕಿಲ್ಲೆ ಮೈದಾನದ ತನಕ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಜಾಥಾಕ್ಕೆ ಎನ್ಎಸ್ಯು ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರು ಶಾಕೀರ್ ಕೂರ್ನಡ್ಕ ಅವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು. ಬೆಂಗಳೂರು ರೋಯಲ್ ಗ್ರೂಪ್ಸ್ ನ ಹಾಜಿ ರಫೀಕ್ ಮತ್ತು ಸೌದಿ ಅರೇಬಿಯಾದ ಪಿ.ಕೆ.ಗ್ರೂಫ್ಸ್ ನ ಫೈರೋಝ್ ಪರ್ಲಡ್ಕ ಧ್ವಜಾರೋಹಣ ನೆರವೇರಿಸಿದರು.


































