
ಸಂಜೆವಾಣಿ ವಾರ್ತೆ
ಹುಣಸೂರು,ನ.02-ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಹೊರಗಿನವರಿಗೆ ಆದ್ಯತೆ ನೀಡುವ ಬದಲು, ಸ್ಥಳೀಯ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಕಾಯಕ ಸಮಾಜದ ತಾಲೂಕು ಅಧ್ಯಕ್ಷ ಹೊನ್ನಪ್ಪ ಒತ್ತಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಣಸೂರು ತಾಲೂಕಿನಲ್ಲಿ ಕಾಯಕ ಸಮಾಜದ ಸುಮಾರು 70 ಸಾವಿರ ಮತದಾರರಿದ್ದು, ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರನ್ನು ಭೇಟಿ ಮಾಡಿ, ಜಿಲ್ಲಾ ಪಂಚಾಯತ್ನ ಒಂದು ಕ್ಷೇತ್ರದಲ್ಲಿ ಹಾಗೂ ತಾಲೂಕು ಪಂಚಾಯತ್ನ ಆರು ಕ್ಷೇತ್ರಗಳಲ್ಲಿ ಕಾಯಕ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ. ನಮ್ಮ ಸಮುದಾಯದ ಜನಸಂಖ್ಯೆ ಹಾಗೂ ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿ ರಾಜಕೀಯ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಹಣಬಲ, ಜಾತಿಬಲ ಹೊಂದಿರುವವರಿಗೆ ಹಾಗೂ ಹೊರಗಿನಿಂದ ಬಂದವರಿಗೆ ರಾಜಕೀಯವಾಗಿ ಆದ್ಯತೆ ನೀಡುತ್ತಿರುವುದು ಖಂಡನೀಯ. ಮುಂದಿನ ಚುನಾವಣೆಗಳಲ್ಲಾದರೂ ಸ್ಥಳೀಯ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಸಣ್ಣ ಸಮುದಾಯಗಳ ಯುವಕರಿಗೆ ಅವಕಾಶ ನೀಡಿದರೆ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ನಾಯಕ ಸಮಾಜದ ಮುಖಂಡ ಹಾಗೂ ರಕ್ಷಾ ಸಮಿತಿ ಸದಸ್ಯ ನಿಲವಾಗಿಲು ಪ್ರಭಾಕರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟೂರಿನಲ್ಲಿ ಹಣಬಲ ಹೊಂದಿರುವವರಿಗೆ ಮಾತ್ರ ಟಿಕೆಟ್ ನೀಡುವ ಬದಲು, ಸಾಮಾಜಿಕವಾಗಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಾಗೂ ರೈತರ ಸಮಸ್ಯೆಗಳನ್ನು ಅರಿತಿರುವ ಸ್ಥಳೀಯ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸರ್ವ ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಜನರೊಂದಿಗೆ ಬೆರೆತು ಕೆಲಸ ಮಾಡುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದರಿಂದ ಪಕ್ಷದ ಸಂಘಟನೆ ಮತ್ತು ಜನರ ವಿಶ್ವಾಸ ಹೆಚ್ಚಲಿದೆ ಎಂದು ತಿಳಿಸಿದರು.























