
ಮುಲ್ಲಾನ್ ಪುರ, ಜೂ.೮: ಪದಾರ್ಪಣೆ ಆಟಗಾರ ಮಾನವ್ ಸುತಾರ್ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾದ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಜಯದ ಹೊಸ್ತಿಲಲ್ಲಿದೆ.
ಇಲ್ಲಿನ ಮಹಾರಾಜ ಯಾದವಿಂದ್ರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ ೧೧೩ಕ್ಕೆ ೫ ವಿಕೆಟ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ತಂಡ, ೫೮.೪ ಓವರ್ ಗಳಲ್ಲಿ ಕೇವಲ ೧೫೨ ರನ್ ಗಳಿಗೆ ಸರ್ವಪತನ ಕಂಡಿತು.
ರಹ್ಮತ್ ಶಾ (೬೦) ಅವರ ಅರ್ಧ ಶತಕವನ್ನು ಹೊರತುಪಡಿಸಿ ಉಳಿದ ಯಾರೂ ಭಾರತ ತಂಡದ ವೇಗ ಮತ್ತು ಸ್ಪಿನ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದ ೨೩ ವರ್ಷದ ರಾಜಸ್ಥಾನದ ಮಾನವ್ ಸುತಾರ್ ೨೨ ಓವರ್ ಗಳಲ್ಲಿ ೩೩ಕ್ಕೆ ೬ ವಿಕೆಟ್ ಉರುಳಿಸಿ ಭಾರತೀಯರ ಮೇಲುಗೈಗೆ ಕಾರಣರಾದರು. ಅದರಲ್ಲೂ ಹತ್ತು ಓವರ್ ಮೇಡನ್ ಮಾಡಿದ್ದು, ಸುತಾರ್ ಅವರ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಂತಿತ್ತು. ಜತೆಗೆ ಕನ್ನಡಿಗ ಪ್ರಸಿದ್ಧ್ ೩ ವಿಕೆಟ್ ಕಬಳಿಸಿ ಪ್ರವಾಸಿ ತಂಡವನ್ನು ಫಾಲೋ ಆನ್ ಗೆ ಗುರಿಯಾಗಲು ನೆರವಾದರು.
ಫಾಲೋ ಆನ್ ಗೆ ಒಳಗಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಅಫಘಾನಿಸ್ತಾನ, ಭೋಜನಾ ವಿರಾಮದ ವೇಳೆಗೆ ೪ ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೮ ರನ್ ಗಳಿಸಿತ್ತು.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಾರಮ್ಯ ಸಾಧಿಸಿರುವ ಭಾರತೀಯರು ಸೋಮವಾರ ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರೆ, ನಿಗದಿತ ಅವಧಿಗಿಂತ ಮೊದಲೇ ಪಂದ್ಯವನ್ನು ವಶಪಡಿಸಿಕೊಳ್ಳುವ ಅವಕಾಶ ಆತಿಥೇಯ ತಂಡದ ಮುಂದಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ ೧೨೭ ಓವರ್ ಗಳಲ್ಲಿ ೮ ವಿಕೆಟ್ ಗೆ ೫೬೪ (ಶುಬ್ಮನ್ ಗಿಲ್ ೧೨೬, ಕೆ.ಎಲ್.ರಾಹುಲ್ ೧೦೦, ಪಂತ್ ೮೧, ಸಾಯಿ ಸುದರ್ಶನ್ ೮೧, ವಾಷಿಂಗ್ಟನ್ ಸುಂದರ್ ೫೨; ಮೊಹಮ್ಮದ್ ಸಲೀಮ್ ೧೪೦ಕ್ಕೆ ೬).
ಅಫಘಾನಿಸ್ತಾನ: ೫೮.೪ ಓವರ್ ಗಳಲ್ಲಿ ೧೫೨ (ರಹ್ಮತ್ ಶಾ ೬೦, ಶಾಹಿದಿ ೨೦; ಮಾನವ್ ಸುತಾರ್ ೩೩ಕ್ಕೆ ೬, ಪ್ರಸಿದ್ಧ್ ೩೭ಕ್ಕೆ ೩).






















