
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ನ.04:- ಕಳೆದ ವರ್ಷ ಶ್ರೀ ಸಪ್ತಮಾತೃಕಾ ದೇವಿರಮ್ಮನವರ ಸನ್ನಿಧಾನದಲ್ಲಿ ಮಾತು ಕೊಟ್ಟಂತೆ, ಈ ವರ್ಷ ದೇಗುಲದ ಸುತ್ತ ಸಿಮೆಂಟ್ ರಸ್ತೆ ಮಾಡಿಸಲಾಗಿದ್ದು. ಆದ್ದೂರಿಯಾಗಿ ಜಾತ್ರೆ ಆಚರಿಸಲು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಜನತೆ ಜತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಲ್ಲ ಇಲಾಖೆಯವರು ಸಹಕರಿಸುವಂತೆ ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.
ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿನ ದೇವಿರಮ್ಮನ ದೇಗುಲದ ಆವರಣದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ಸಾರ್ವಜನಿಕರ ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು. ನ. 13 ರಿಂದ ಜಾತ್ರಾ ಮಹೋತ್ಸವ ಆರಂಭವಾಗಿ ನ.14 ರಂದು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು. ಜಾತ್ರೆಯ ಪ್ರಮುಖ ಕೇಂದ್ರ ಬಿಂದಾಗಿರುವ ಸಿಡಿ ಉತ್ಸವ ನ.13 ರಂದು ನಡೆಯಲಿದ್ದು. ನ.14 ರಂದು ಶ್ರೀ ಸಪ್ತಮಾತೃಕಾ ದೇವಿರಮ್ಮನವರ ರಥೋತ್ಸವ ಆವರಣದಲ್ಲಿ ನಡೆಯಲಿದೆ. ಇನ್ನ ಜಾತ್ರಾ ಮಹೋತ್ಸವಕ್ಕೆ ಅಗತ್ಯತಾ ಸಿದ್ಧತೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ಕೊಡುತ್ತೇನೆ ಅಧಿಕಾರಿಗಳ ವರ್ಗ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಯಲು ಶ್ರಮಿಸ ಬೇಕು ಎಂದು ಹೇಳಿದರು.
ಅಗತ್ಯ ಸಿದ್ಧತೆಗೆ ಸೂಚನೆ:- ಸ್ಥಳೀಯ ಗ್ರಾ.ಪಂ. ವತಿಯಿಂದ ಜಾತ್ರೆ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯವಾಗಿ ಬೇಕಾಗುವ ಮುಂತಾದ ಮೂಲ ಸೌಲಭ್ಯವನ್ನು ಕುಂದುಕೊರತೆ ಬಾರದಂತೆ ನೋಡಿಕೊಳ್ಳ ಬೇಕು ಎಂದು ಸೂಚನೆ ನೀಡಿದ ಡಿ.ರವಿಶಂಕರ್, ಪ್ರತಿಬಾರಿಯಂತೆ ದೇಗುಲ ಹಾಗೂ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು. ದೇಗುಲದ ರಾಜ ಗೋಪುರ ಮತ್ತು ವಿಮಾನ ಗೋಪುರ ಹಾಗೂ ಕಲ್ಯಾಣಿ ಸ್ವಚ್ಛತೆ, ದೇಗುಲದ ಕಂಪೌಂಡಿಗೆ ಸುಣ್ಣ ಬಣ್ಣ, ವೀರಗಾಸೆ, ಊಟದ ವ್ಯವಸ್ಥೆ, ಸೆಸ್ಕಾಂ ಇಲಾಖೆ ವಿದ್ಯುತ್ ವ್ಯತ್ಯಾಸ ಆಗದಂತೆ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸ ಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸಿ.ಪಿ ರಮೇಶ್ ಕುಮಾರ್, ತಹಸೀಲ್ದಾರ್ ರುಕಿಯಾ ಬೇಗಂ, ಸಬ್ ಇನ್ಸ್ ಪೆಕ್ಟರ್ ವಿಜಯ್ ರಾಜ್, ಸೆಸ್ಕಾಂ ಎ. ಇ. ಇ ಮಧುಸೂದನ್, ಪಿಡಿಒ ಪೂರ್ಣಿಮಾ, ವೆಂಕಟೇಶ್, ಕೆ.ಆರ್ ಡಿ.ಐ.ಎಲ್, ಇಸ್ರಾದ್, ಉಪ ತಹಸೀಲ್ದಾರ್ ಮಹೇಶ್ ಸೇರಿದಂತೆ ಮುಖಂಡರಾದ ಬಾಚಳ್ಳಿ ಚಂದ್ರಹಾಸ ತಂದೆ ಧರ್ಮ ಮತ್ತಿತರರು ಇದ್ದರು.























