ಶೇ.56 ಮೀಸಲಾತಿ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡಲಿ: ವಿ.ಎಸ್.ಉಗ್ರಪ್ಪ ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.1:-
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಚ್ಚರಿಕೆ ನೀಡಿದರು.


ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಎಸ್ಸಿ, ಎಸ್ಟಿ ಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಅಧಿಕಾರಕ್ಕೆ ಬಂದ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನ್ಯಾಯ ಮಾಡುತ್ತಲೇ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಗಳಿಗೆ ಮೀಸಲಾತಿ ನೀಡಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರೂ ರಾಜಕೀಯ ಪಕ್ಷಗಳು ಈ ಎರಡೂ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡದೆ ಬರೀ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ ಎಂದು ಹರಿಹಾಯ್ದರು.


ಶೇ.56 ಮೀಸಲಾತಿ ಪ್ರಕಾರ ರಾಜ್ಯ ಸರ್ಕಾರ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಅದಕ್ಕೆ ಬೇಕಿರುವ ಕಾನೂನಾತ್ಮಕ ಕ್ರಮಗಳನ್ನು ಮೊದಲು ಕೈಗೊಳ್ಳಬೇಕು. ಅದನ್ನು ಬಿಟ್ಟು 2022 ರ ಮೀಸಲಾತಿಯಂತೆ ಹುದ್ದೆಗಳಿಗೆ ನೇಮಕ ಮಾಡಿದರೆ ಅನ್ಯಾಯವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 2.74 ಲಕ್ಷ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ 52 ಸಾವಿರ ಹುದ್ದೆಗಳನ್ನು ಹಳೆ ಮೀಸಲಾತಿಯನ್ವಯ ತುಂಬುವುದಾಗಿ ಹೇಳಿದೆ. ಇದರಿಂದ 1600 ಪರಿಶಿಷ್ಟ ಪಂಗಡ ಮತ್ತು 2 ಸಾವಿರ ಪರಿಶಿಷ್ಟ ಜಾತಿಯ ಹುದ್ದೆಗಳು ವಂಚಿತವಾಗಲಿವೆ ಎಂದು ಹೇಳಿದರು.


ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ 2022 ರಲ್ಲಿ ಎಸ್ಟಿ ಸಮುದಾಯಕ್ಕೆ ಶೇ.4 ಮತ್ತು ಎಸ್ಸಿ ಸಮುದಾಯಕ್ಕೆ ಶೇ.2 ಹೆಚ್ಚಳ ಮಾಡಿ ಶೇ.50 ರಷ್ಟು ಇದ್ದ ಮೀಸಲಾತಿಯನ್ನು ಒಟ್ಟಾರೆ ಶೇ.56 ಕ್ಕೆ ಹೆಚ್ಚಳ ಮಾಡಿದರೂ ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನುಸರಿಸಲಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಶೇ. 56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್ ಗೆ ಸೇರಿಸಿ, ಶೇ56 ರ ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸುವ ಮೂಲಕ ನ್ಯಾಯಾಂಗ ವಿಚಕ್ಷಣೆಯಿಂದ ಈ ಕಾನೂನನ್ನು ಹೊರಗಿಡಲು ಬೇಕಾದ ಸಂಸದರ ಸಂಖ್ಯಾಬಲವಿದ್ದರೂ ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ರಾಜ್ಯ ಬಿಜೆಪಿಯಾಗಲಿ ಇದರ ಬಗ್ಗೆ ಮುತುವರ್ಜಿ ವಹಿಸಲಿಲ್ಲ ಎಂದು ಹೇಳಿದರು.


ನಂತರ 2023 ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಇದರ ಬಗ್ಗೆ ಮುತುವರ್ಜಿ ವಹಿಸಿ ಒಂಬತ್ತನೇ ಶಡ್ಯೂಲ್ ಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ.ಇದರಿಂದ ಎಸ್ಸಿ ಮತ್ತು ಎಸ್ಟಿ ಸಮುದಾಯಗಳು ಅನ್ಯಾಯಕ್ಕೆ ಒಳಗಾಗಿವೆ ಎಂದು ಹೇಳಿದರು.
ಇದರ ಬಗ್ಗೆ ಧನಿಯತ್ತಬೇಕಿದ್ದ ಸಮುದಾಯಗಳ ಸಚಿವರು, ಶಾಸಕರುಗಳು ಮೌನವಹಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪರ ಎನ್ನುವ ಸಿದ್ಧರಾಮಯ್ಯ ಅವರು ತಕ್ಷಣ ಸರ್ವ ಪಕ್ಷ ಸಭೆ ಕರೆದು ಪ್ರಧಾನಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ದು ಶೇ.56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್ ಗೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.


ಎಸ್ಸಿ, ಎಸ್ಟಿ ಸಮುದಾಯದವರ ತಾಳ್ಮೆ ಪರೀಕ್ಷೆ ಮಾಡಬೇಡಿ, ಇಷ್ಟು ದಿನ ಮೂಗಿಗೆ ತುಪ್ಪ ಹಚ್ಚಿದ್ದು ಸಾಕು. ನಮ್ಮ ಹಕ್ಕಿಗಾಗಿ ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧವಾಗಬೇಕುತ್ತದೆ.ಇದಕ್ಕೆ ನರೇಂದ್ರ ಮೋದಿ ಮತ್ತು ಸಿದ್ಧರಾಮಯ್ಯ ಅವಕಾಶ ನೀಡಬಾರದು ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಅಖಿಲಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯಧ್ಯಕ್ಷ ನರಸಿಂಹಯ್ಯ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರು, ಹಿನಕಲ್ ಕೆಂಪನಾಯಕ, ಕೆ.ಸಣ್ಣಯ್ಯ ನಾಯಕ, ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ದ್ಯಾವಪ್ಪ ನಾಯಕ ಸೇರಿ ಉಪಸ್ಥಿತರಿದ್ದರು.