
ಸಂಜೆವಾಣಿ ನ್ಯೂಸ್
ಮೈಸೂರು: ಏ.16:- 2047ರ ವಿಕಸಿತ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಜತೆಗೆ ದೇಶದ ಅಭಿವೃದ್ಧಿಯಲ್ಲೂ ಮಹಿಳೆಯರು ನಾಯಕತ್ವ ವಹಿಸಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗಾಗಿ ಶೇ.33ರಷ್ಟು ಮೀಸಲಾತಿ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮಹಿಳೆಯರು ಸಬಲೀಕರಣಗೊಳ್ಳಬೇಕು. ಇದಕ್ಕಾಗಿ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
2021ರಲ್ಲೇ ಜನಗಣತಿ ಮಾಡಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಜಗಣಗತಿಯನ್ನು 2027ರಲ್ಲಿ ಮಾಡಲಾಗುತ್ತಿದೆ. 2029ರ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಅಧಿವೇಶನದಲ್ಲಿ 543 ಸೀಟ್ಗಳಿವೆ. ಅದನ್ನು ಹೆಚ್ಚಿಸಿ 816ಕ್ಕೆ ಹೆಚ್ಚಿಸುತ್ತಿದ್ದಾರೆ. ಇದರಿಂದ ಪುರುಷರಿಗೂ ತಮ್ಮ ಸ್ಥಾನ ತಪ್ಪಿ ಹೋಗುವ ಭಯವೂ ಇರುವುದಿಲ್ಲ. ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಾನಗಳನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಇದು ಸಂಭ್ರಮದ ಕ್ಷಣ. ಭಾರತದ ಮಹಿಳೆಯರಲ್ಲದೆ ವಿಶ್ವದ ಮಹಿಳೆಯರು ಸಂಭ್ರಮಿಸುವ ಕ್ಷಣ ಎಂದರು.
21ನೇ ಶತಮಾನದ ಪ್ರಮುಖ ನಿರ್ಣಯಗಳಲ್ಲಿ ಈ ನಿರ್ಣಯವೂ ಒಂದಾಗಿರುತ್ತದೆ. ವಿಶ್ವದ ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ಈ ರೀತಿಯ ಮೀಸಲಾತಿ ಇಲ್ಲವೆ ಇಲ್ಲ. ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಮಹಿಳಾ ಮೀಸಲಾತಿ ವಿಚಾರದಲ್ಲಿ ಎಲ್ಲರೂ ಒಕ್ಕೂರಲಿನಿಂದ ಈ ಕಾಯ್ದೆಯನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.
77 ವರ್ಷಗಳ ಕಾಲ ಮಹಿಳೆಯರು ಕಾದಂತಹ ಕ್ಷಣ ಇದಾಗಿದೆ. ರಾಜಕಾರಣದಲ್ಲಿ ಅವಕಾಶ ಗಳಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ ಒಂದು ವಾರಗಳ ಕಾಲ ಜನಜಾಗೃತಿ ದೃಷ್ಟಿಯಲ್ಲಿ ರಾಜ್ಯದ 15 ಭಾಗಳಲ್ಲಿ ನಾರಿಶಕ್ತಿ ಸಮ್ಮೇಳನ, ನಾರಿಶಕ್ತಿ ಪಾದಯಾತ್ರೆ, ಬೈಕ್ ಮತ್ತು ಸ್ಕೂಟಿ ರ್ಯಾಲಿ ನಡೆಯುತ್ತಿದೆ. ಜತೆಗೆ ಲೇಖನಗಳ, ಮಾನವ ಸರಪಳಿ, ಸಾಮಾಜಿಕ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂಭ್ರಮದ ಕ್ಷಣದಲ್ಲಿ ಮಹಿಳೆರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಹಾಗೂ ತಮ್ಮ ಅನುಭವವನ್ನು ತಿಳಿಸಬೇಕೆಂಬ ದೃಷ್ಟಿಯಿಂದ 9667173333 ದೂರವಾಣಿ ಸಂಖ್ಯೆಗೆ ಮಿಸ್ಡ್ಕಾಲ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಸಹಿ ಸಂಗ್ರಹ ಅಭಿಯಾನವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಬಿಜೆಪಿ ಮೋರ್ಚಾದ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನಿ, ನಿಕಟ ಪೂರ್ವ ರಾಜ್ಯಾಧ್ಯಕ್ಷೆ ವೀಣಾ ಪ್ರಕಾಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಸೇರಿದಂತೆ ಇತರರು ಹಾಜರಿದ್ದರು.

























