
ಧರ್ಮ ಕೀರ್ತಿರಾಜ್ ಅಭಿನಯದ ಚಿತ್ರದ ಟ್ರೇಲರ್ ಬಿಡುಗಡೆ
ನಾಪತ್ತೆ ಪ್ರಕರಣಗಳು, ಕೊಲೆ ಹಾಗೂ ನಿಗೂಢ ಘಟನೆಗಳ ಸುತ್ತ ಸಾಗುವ ಸಸ್ಪೆನ್ಸ್–ಥ್ರಿಲ್ಲರ್ ಕಥಾಹಂದರದ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮ ಹರೀಶ್ ಹಾಗೂ ಹಿರಿಯ ಪ್ರಚಾರಕರ್ತ ನಾಗೇಂದ್ರ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕಡಲ ತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ಊರಗೌಡ ಕಾಣೆಯಾಗುತ್ತಾನೆ. ತನಿಖೆಗೆ ಬಂದ ಪೊಲೀಸರೂ ನಾಪತ್ತೆಯಾಗುತ್ತಾರೆ. ಇದರ ಹಿಂದಿನ ರಹಸ್ಯ ಭೇದಿಸಲು ಬರುವ ಮಫ್ತಿ ಪೊಲೀಸ್ ಸುತ್ತ ಕಥೆ ಸಾಗುತ್ತದೆ. ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಧರ್ಮ ಕೀರ್ತಿರಾಜ್ ಅಮಾನತುಗೊಂಡ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಗುರುರಾಜ್ ಜಗ್ಗೇಶ್ ನಕಾರಾತ್ಮಕ ಛಾಯೆಯ ಕ್ರೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಧರ್ಮ ಪೊಲೀಸ್ ಅಧಿಕಾರಿಯಾಗಿದ್ದಾರೆ. ನಾಯಕಿ ವೇದ್ವಿಕಾಗೆ ಇದು ಮೊದಲ ಕನ್ನಡ ಚಿತ್ರ. ಮನಾಲಿಯಲ್ಲಿ ಚಿತ್ರೀಕರಿಸಿದ ಯುಗಳ ಗೀತೆ ಚಿತ್ರದ ವಿಶೇಷತೆಗಳಲ್ಲಿ ಒಂದು ಎಂದು ಅವರು ತಿಳಿಸಿದರು.
ಚಿತ್ರದಲ್ಲಿ ರೈತರ ಬದುಕು ಹಾಗೂ ಕೃತಕ ಆಹಾರದಿಂದ ಉಂಟಾಗುವ ಸಮಸ್ಯೆಗಳನ್ನೂ ಪ್ರಸ್ತಾಪಿಸಲಾಗಿದೆ ಎಂದು ನಿರ್ದೇಶಕ ಪುನೀತ್ ಅರಸೀಕೆರೆ ಹೇಳಿದರು. ಮಾಳವಿಕಾ ಅವಿನಾಶ್ ಪೊಲೀಸ್ ಕಮಿಷನರ್ ಪಾತ್ರದಲ್ಲಿದ್ದು, ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆಯಿದೆ.
ಯುವ ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಪವರ್ ಪಿಕ್ಚರ್ ಮತ್ತು ಎನ್. ಅನಿತಾ ಸುಕೇಂದ್ರ ನಿರ್ಮಿಸಿರುವ ಚಿತ್ರದಲ್ಲಿ ಸಾಧು ಕೋಕಿಲ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು, ಕಾಕ್ರೋಚ್ ಸುಧಿ ಹಾಗೂ ಡ್ರ್ಯಾಗನ್ ಮಂಜು ಸೇರಿದಂತೆ ಹಲವು ಕಲಾವಿದರಿದ್ದಾರೆ. ರೋಣದ ಬಕ್ಕೇಶ್ ಸಂಗೀತ, ಗೌತಮ್ ಮಟ್ಟಿ ಛಾಯಾಗ್ರಹಣ, ದೀಪು ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ.




















