Home ಜಿಲ್ಲೆ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಪ್ರಕಟಣೆಗೆ ರೈತಸಂಘ ತೀವ್ರ ಆಕ್ರೋಶ

ಚಾಮುಂಡೇಶ್ವರಿ ವಿದ್ಯುತ್ ನಿಗಮದ ಪ್ರಕಟಣೆಗೆ ರೈತಸಂಘ ತೀವ್ರ ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.04:
ರಾಜ್ಯದಲ್ಲಿ ಈಗಾಗಲೇ ಒಣಹವೆ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಬೇಸಿಗೆಯ ಬಿಸಿಲಿನ ಝಳ ಮತ್ತಷ್ಟು ತೀವ್ರವಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಬಿರು ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಸ್ಥಗಿತಗೊಳ್ಳುವ ಚಿಂತೆಯಲ್ಲಿ ಈಗಾಗಲೇ ರೈತರು ಮುಳುಗಿದ್ದಾರೆ. ಬಿರು ಬೇಸಿಗೆಯಲ್ಲಿ ತಾವು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳುವತ್ತ ರೈತ ಸಮುದಾಯ ಚಿಂತಿಸುತ್ತಿರುವ ಸಮಯದಲ್ಲಿಯೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು ತಾಲೂಕಿನಾದ್ಯಂತ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.


ಅನಧಿಕೃತ ವಿದ್ಯುತ್ ಸಂಪರ್ಕಗಳಿಂದ ವಿದ್ಯುತ್ ನಷ್ಠ/ಸೋರಿಕೆ ಪ್ರಮಾಣ ಹೆಚ್ಚಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಆರ್ಥಿಕ ನಷ್ಠ ಉಂಟಾಗುತ್ತಿದೆ. ಅನಧಿಕೃತ ವಿದ್ಯುತ್ ಸಂಪರ್ಕಗಳಿಂದ ಅಪಘಾತಗಳು ಸಂಭವಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ವಿದ್ಯುತ್ ಸಂಪರ್ಕ ಕಂಡುಬಂದಲ್ಲಿ ತಕ್ಷಣವೇ ವಿದ್ಯುತ್ ನಿಲುಗಡೆ ಮಾಡಲಾಗುವುದು. ರೈತ ಸಮುದಾಯ ತಮ್ಮ ಐ.ಪಿ ಸ್ಥಾವರಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹೊಸ ಶೀಘ್ರ ಸಂಪರ್ಕ ಯೋಜನೆ(ಎನ್.ಎಸ್.ಎಸ್.ವೈ) ಅನುಸಾರ ನಿಗಮಕ್ಕೆ ನಿಗಧಿತ ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕವನ್ನು ಪಡೆಯಬೇಕು. ಇಲ್ಲದಿದ್ದರೆ ಯಾವುದೇ ಮುನ್ಸೂಚನೆಯಿಲ್ಲದೆ ರೈತರ ಐ.ಪಿ.ಸೆಟ್ಟುಗಳ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗುವುದೆಂದು ತಾಲೂಕಿನ ಸೆಸ್ಕಾಂ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಸೆಸ್ಕಾಂ ಹೊರಡಿಸಿರುವ ಕರಪತ್ರದ ಬಗ್ಗೆ ತಾಲೂಕು ರೈತಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸೆಸ್ಕಾಂ ತನ್ನ ರೈತ ವಿರೋಧಿ ನಿಲುವಿನಿಂದ ತಕ್ಷಣವೇ ಹೊರಬರುವಂತೆ ಆಗ್ರಹಿಸಿದೆ.


ಸೆಸ್ಕಾಂ ನಿಲುವನ್ನು ತೀವ್ರವಾಗಿ ಖಂಡಿಸಿರುವ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ತಾಲೂಕಿನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್ ಆಧಾರಿತ ಕೃಷಿಕರಿದ್ದು ವಿದ್ಯುತ್ ಇಲಾಖೆಯ ಲಂಚಗುಳಿತದಿಂದ ಕೆಲವರು ಹಣ ಹೊಂದಿಸಲಾಗದೆ ತಮ್ಮ ಐ.ಪಿ ಸೆಟ್ಟುಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಕೃಷಿಯನ್ನೆ ನಂಬಿ ಬದುಕುತ್ತಿರುವ ರೈತನಿಗೆ ನೀರು ಮತ್ತು ವಿದ್ಯುತ್ ಅತ್ಯಗತ್ಯ. ವಿದ್ಯುತ್ ಆಧಾರಿತ ರೈತರು ತಾಲೂಕಿನಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ತೆಂಗು, ಅಡಿಕೆ, ಕಬ್ಬು, ಬಾಳೆ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ.


ರೈತನಿಗೆ ಇಂದು ಕೃಷಿ ಲಾಭದಾಯಕವಾಗಿಲ್ಲ. ಇದರ ಪರಿಣಾಮ ರೈತ ಸಾಲಗಾರನಾಗಿದ್ದಾನೆ. ಸಾಲಗಾರನಾಗಿರುವ ರೈತರ ಮೇಲೆ ವಿದ್ಯುತ್ ಇಲಾಖೆ ಅಕ್ರಮ ಸಂಪರ್ಕಗಳ ಬೆದರಿಕೆ ಹಾಕಿ ವಿದ್ಯುತ್ ಸಂಪರ್ಕಕ್ಕೆ ಬಲವಂತ ಪಡಿಸಿವುದು ಸಲ್ಲದು. ವಿದ್ಯುತ್ ಇಲಾಖೆಯ ಬೆದರಿಕೆ ನೀತಿಯಿಂದ ರೈತ ಮತ್ತಷ್ಟು ಸಾಲಗಾರನಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ತುಳಿಯಬೇಕಾಗುತ್ತದೆ. ರೈತನ ಬದುಕು ಆತ ಬೆಳೆಯುವ ಬೆಳೆಗಳ ಮೇಲೆ ನಿಂತಿದೆ.


ವಿದ್ಯುತ್ ಇಲಾಖೆ ಜಾರಿಗೆ ತಂದಿರುವ ಹೊಸ ಶೀಘ್ರ ಸಂಪರ್ಕ ಯೋಜನೆ(ಎನ್.ಎಸ್.ಎಸ್.ವೈ)ಗೆ ರೈತಸಂಘದ ವಿರೋಧವಿಲ್ಲ. ಆದರೆ ನಿಗಧಿತ ಶುಲ್ಕವನ್ನು ಪಾವತಿಸಿ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಬಂದ್ ಮಾಡುವ ಇಲಾಖೆಯ ಬೆದರಿಕೆಯ ನೀತಿಗೆ ನಮ್ಮ ವಿರೋಧವಿದೆ. ವಿದ್ಯುತ್ ಇಲಾಖೆ ಯಾವುದೇ ಮುನ್ಸೂಚನೆಯಿಲ್ಲದೆ ಅನಧಿಕೃತ ಪಂಪ್ ಸೆಟ್ಟುಗಳ ವಿದ್ಯುತ್ ಸಂಪರ್ಕ ಬಂದ್ ಮಾಡುವ ಬದಲು ರೈತರಿಗೆ ಒಂದಷ್ಟು ಕಾಲಾವಕಾಶ ನೀಡಿ ರೈತರನ್ನು ಜಾಗೃತಗೊಳಿಸುವ ಕೆಲಸ ಮಾಡಲಿ. ಅಕ್ರಮ-ಸಕ್ರಮ ಜಾಗೃತಿ ಕಾರ್ಯಕ್ರಮಕ್ಕೆ ತಾಲೂಕು ರೈತಸಂಘ ಅಗತ್ಯ ಸಹಕಾರ ನೀಡಲಿದೆ. ಅದನ್ನು ಬಿಟ್ಟು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೈತರ ಬೆಳೆ ಹಾಳು ಮಾಡಲು ಮುಂದಾದರೆ ತಾಲೂಕು ರೈತಸಂಘ ಉಗ್ರ ಹೋರಾಟಕ್ಕಿಳಿಯಲಿದೆ ಎಂದು ಇಬ್ಬರು ರೈತ ನಾಯಕರು ಎಚ್ಚರಿಸಿದ್ದಾರೆ.