
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.06: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 112 ವರ್ಷಗಳಿಂದಲೂ ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಹೆಚ್ ಲಕ್ಷ್ಮಿಕಾಂತ ರೆಡ್ಡಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕವು ಸನ್ಮಾರ್ಗ ಗೆಳೆಯರ ಬಳಗದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ಇಡುವಲ್ಲಿ ಪರಿಷತ್ತಿನ ಪಾತ್ರ ಮಹತ್ವದ್ದಾಗಿದೆ ಎಂದು ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಾಧನೆಯ ಹೆಜ್ಜೆಗಳು ಕುರಿತು ಕುರುಗೋಡು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ತಿಪ್ಪೇರುದ್ರ ಸಂಡೂರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಹಂದಿಹಾಳು ಮಾತನಾಡುತ್ತಾ ಬಳ್ಳಾರಿ ಜಿಲ್ಲೆಗೆ 69 ವರ್ಷಗಳ ನಂತರ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಲಭ್ಯವಾಗಿದ್ದು, ಕಾನೂನಿನ ತೊಡಕಿನಿಂದಾಗಿ ಸಮ್ಮೇಳನ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರ ಸಮ್ಮೇಳನ ಬಳ್ಳಾರಿಯಲಿ ನಡೆಸಲು ಸರ್ವ ರೀತಿಯ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಪ್ರಯತ್ನಿಶೀಲವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಥೆಗಾರರಾದ ವೀರೇಂದ್ರ ರಾವಿಹಾಳ್, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಉಪಸ್ಥಿತರಿದ್ದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರಾದ ಚಿತ್ರಕಲಾಾವಿದ ಎಂ ರಫೀ, ಆಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ಬಿ ರಮಣಪ್ಪ, ವಂದನಾ ಶಾಲೆಯ ಅಧ್ಯಕ್ಷ ಕೆ ಬಿ ಈಶ್ವರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಕಪ್ಪಗಲ್ಲು ಚಂದ್ರಶೇಖರ್ ಆಚಾರ್ ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.


























