
ಉಡುಪಿ- ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ. ಇದರಲ್ಲಿ ಇರುವ ಗ್ಯಾಸ್ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯುವುದಿಲ್ಲ ಎಂದು ಮೋಲ್ಟೋಕೇರ್ ಪ್ರಾಪರ್ಟಿ ಸರ್ವೀಸ್ನ ನಿರ್ದೇಶಕ ಕೃಷ್ಣರಾಜ ತಂತ್ರಿ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬ್ರಹ್ಮಗಿರಿಯ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಏರ್ ಕಂಡೀಷನರ್ ಕಾರ್ಯನಿರ್ವಹಣೆ: ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಏಸಿಯು ಕೋಣೆಯಲ್ಲಿರುವ ಗಾಳಿಯನ್ನು ಶುದ್ಧಗೊಳಿಸಿ ತಂಪು ಮಾಡುತ್ತದೆ. ಹೊರತು ಹೊರಗಿನ ಗಾಳಿಯನ್ನು ಒಳಗಡೆ ತೆಗೆದುಕೊಳ್ಳುವುದಿಲ್ಲ. ಏಸಿಯ ಇಂಡೋರ್ ಮತ್ತು ಔಟ್ಡೋರ್ ಯುನಿಟ್ಗಳಿಗೆ ೧೦ ಅಡಿಗಳ ಅಂತರ ಅಗತ್ಯ ಇರಬೇಕು. ಇಲ್ಲದಿದ್ದರೆ ಅದು ಹೆಚ್ಚು ಕೂಲ್ ಆಗುವುದಿಲ್ಲ ಎಂದರು.
ಇಂದು ವಾತಾವರಣದಲ್ಲಿ ಉಷ್ಣಾಂಶದ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಮನೆ, ಕಚೇರಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಏರ್ ಕಂಡೀಷನರ್ ಅಳವಡಿಕೆ, ಬಳಕೆ ಹೆಚ್ಚುತ್ತಿದೆ. ಏಸಿ ಆರೋಗ್ಯ ಚೆನ್ನಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಏರ್ ಕಂಡೀಷನರ್ ವ್ಯವಸ್ಥೆಯ ಸಮರ್ಪಕ ಬಳಕೆ, ಸೂಕ್ತ ನಿರ್ವಹಣೆ ಮಾಡದಿದ್ದರೆ ವಿದ್ಯುತ್ ವೆಚ್ಚ ಹೆಚ್ಚಳದ ಜೊತೆಗೆ ಏಸಿ ಕಾರ್ಯಕ್ಷಮತೆ ಕುಸಿದು, ಅವಸರದ ದುರಸ್ತಿ ವೆಚ್ಚಗಳು ಹೆಚ್ಚಲಿವೆ ಎಂದರು.
ಏರ್ ಕಂಡೀಷನರ್ಗಳು ೨೪ರಿಂದ ೨೬ ಡಿಗ್ರಿ ಸೆಲ್ಸಿಯಸ್ನಲ್ಲಿ ಕಾರ್ಯ ನಿರ್ವಹಿಸಿದರೆ ವಿದ್ಯುತ್ ಬಳಕೆ ನಿಯಂತ್ರಣ ಸಾಧ್ಯವಾಗುತ್ತದೆ ಮತ್ತು ಅನಗತ್ಯ ಒತ್ತಡ ತಪ್ಪಿಸಬಹುದು. ಕರಾವಳಿಯಲ್ಲಿ ಏರ್ ಕಂಡೀಷನರ್ಗಳು ಕೇವಲ ೧೦ ವರ್ಷ ಬಾಳಿಕೆ ಬರುತ್ತವೆ. ಮಳೆಗಾಲದಲ್ಲಿ ಏರ್ ಕಂಡೀಷನರ್ (೨೬ರಿಂದ ೨೮ ಡಿಗ್ರಿ ಸೆಲ್ಸಿಯಸ್) ಬಳಸಬಹುದು. ಏರ್ ಕಂಡೀಷನರ್ ಇಂಡೋರ್ನಷ್ಟೇ ಔಟ್ಡೋರ್ಗೂ ಗಮನ ಅಗತ್ಯ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು. ಮೋಲ್ಟೋಕೇರ್ ಸಂಸ್ಥೆಯ ಪ್ರಶಾಂತ್, ಗಣೇಶ್, ಶರತ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಮಿತಾ ಸಹಕರಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಕರ್ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕರಾವಳಿಗೆ ಕೂಲರ್ಗಿಂತ ಏಸಿ ಸೂಕ್ತ: ಸಮುದ್ರದಿಂದಾಗಿ ಕರಾವಳಿ ಪ್ರದೇಶದ ವಾತಾವರಣದಲ್ಲಿ ತೇವಾಂಶ (ಹ್ಯುಮಿಡಿಟಿ) ಹೆಚ್ಚು ಇರುತ್ತದೆ. ಆದುದರಿಂದ ಇಲ್ಲಿನ ವಾತಾವರಣಕ್ಕೆ ಏರ್ ಕೂಲರ್ಗಿಂತ ಏರ್ ಕಂಡೀಷನರ್ ಅತೀ ಸೂಕ್ತವಾಗಿದೆ ಎಂದು ಕೃಷ್ಣರಾಜ ತಂತ್ರಿ ತಿಳಿಸಿದ್ದಾರೆ.
ವಾತಾವರಣದಲ್ಲಿ ಸಾಮಾನ್ಯವಾಗಿ ಶೇ.೪೦-೬೦ರಷ್ಟು ತೇವಾಂಶ ಇರಬೇಕು. ಶೇ.೬೦ಕ್ಕಿಂತ ಜಾಸ್ತಿ ಇದ್ದರೆ ದೇಹದಲ್ಲಿ ಹೆಚ್ಚು ಬೆವರು ಬರುತ್ತದೆ. ಶೇ.೪೦ಕ್ಕಿಂತ ಕಡಿಮೆ ಇದ್ದರೆ ದೇಹ ಒಣಗಿ ಹೋಗುತ್ತದೆ. ಕರಾವಳಿಯಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಬೆವರು ಹೆಚ್ಚಾಗಿರುತ್ತದೆ. ಏರ್ ಕಂಡೀಷನರ್ ಕೋಣೆಯಲ್ಲಿರುವ ತೇವಾಂಶವನ್ನು ಹೊರಗೆ ಹಾಕಿ ಒಳಗೆ ತಂಪಿನ ವಾತಾವರಣ ಸೃಷ್ಟಿಸುತ್ತದೆ. ಕೂಲರ್ ಹೊರಗಡೆ ಗಾಳಿಯಲ್ಲಿರುವ ತೇವಾಂಶವನ್ನು ಒಳಗೆ ತರುತ್ತದೆ. ಆದುದರಿಂದ ತೇವಾಂಶ ಜಾಸ್ತಿ ಇರುವ ಕರಾವಳಿಗೆ ಏರ್ ಕಂಡೀಷನರ್ ಹೆಚ್ಚು ಸೂಕ್ತವಾಗಿದೆ ಎಂದರು.



























