
ಪುತ್ತೂರು; ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಅತ್ಯಂತ ಅರ್ಥಪೂರ್ಣ ಮತ್ತು ಶ್ರೇಷ್ಟವಾದ ಕಾಂii. ಅದರಲ್ಲಿಯೂ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಬೆಳಕಿಗೆ ತರುವ ಮೂಲಕ ಪುತ್ತೂರು ಕನ್ನಡ ಸಾಹಿತ್ಯಪರಿಷತ್ ಕೆಲಸ ಅತ್ಯುತ್ತಮವಾಗಿದೆ. ಸಾಹಿತ್ಯ ಕ್ಷೇತ್ರದತ್ತ ಆಕರ್ಷಿತರಾಗುವವರ ಸಂಖ್ಯೆ ಇಂದು ಬಹಳ ಕಡಿಮೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ ಸಾಹಿತ್ಯಕ್ಷೇತ್ರಕ್ಕೆ ಒತ್ತುಕೊಡುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು.
ಅವರು ಭಾನುವಾರ ತೆಂಕಿಲದ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಚಿಗುರೆಲೆ ಬಳಗ ಹಾಗೂ ಮಹಾಪೋಷಕ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರ ಜಂಟಿ ಸಂಯೋಜನೆಯಲ್ಲಿ ‘ಪುತ್ತೂರು ಸಾಹಿತ್ಯೋತ್ಸವ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಸಾಹಿತ್ಯಕ್ಷೇತ್ರಕ್ಕೆ ಅನುಕೂಲವಾಗುವಂತೆ ಪುತ್ತೂರಿನ ಬಾಲವನದಲ್ಲಿ ೨ ಕೋಟಿ ವೆಚ್ಚದಲ್ಲಿ ಧ್ಯಾನಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬರಹಗಾರರಿಗೆ ಮತ್ತು ಸಾಹಿತಿಗಳಿಗೆ ಉತ್ತೇಜನ ತರುವ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗುವುದು ಎಂದ ಅವರು ಸಾಹಿತ್ಯ ಕ್ಷೇತ್ರದ ಜತೆಗೆ ಇತರ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸ ನಡೆಯಬೇಕಾಗಿದೆ. ನಾನು ೧೦ ವಿದ್ಯಾರ್ಥಿಗಳಿಗೆ ನನ್ನ ಸ್ವಂತ ಖರ್ಚಿನಲ್ಲಿ ಐಎಎಸ್ ಕೋಚಿಂಗ್ ನೀಡುವ ವ್ಯವಸ್ಥೆ ಮಾಡಿದ್ದೇನೆ. ನಮ್ಮ ಮಕ್ಕಳು ಐಎಎಸ್-ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಮೂಲಕ ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಮುಂದಾಗಬೇಕು. ಸಾಹಿತ್ಯಕ್ಷೇತ್ರವೂ ಇದಕ್ಕೆ ಪೂರಕ ಎಂದು ಅವರು ಹೇಳಿದರು.
ಸಾಹಿತ್ಯೋತ್ಸವವನ್ನು ಉದ್ಘಾಟಿಸಿದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರು ಮಾತನಾಡಿ, ನಮ್ಮ ತುಳುನಾಡಿನ ಜನತೆ ಯಾವುದೇ ದೇಶದಲ್ಲಿದ್ದರೂ ಇಲ್ಲಿನ ಕಲೆ ಸಂಸ್ಕೃತಿ ಅವರ ರಕ್ತದ ಕಣಕಣದಲ್ಲಿಯೂ ತುಂಬಿರುತ್ತದೆ. ಸುಮಾರು ೫ ವರ್ಷಗಳ ಕಾಲ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸಾಹಿತ್ಯಕ್ಷೇತ್ರದಲ್ಲಿಯೇ ದೊಡ್ಡ ಮೈಲುಗಲ್ಲು. ರಾಜ್ಯದ ಯಾವ ಭಾಗದಲ್ಲಿಯೂ ಇಂತಹ ಕಾರ್ಯಕ್ರಮ ನಡೆದಿಲ್ಲ. ಸಾಹಿತ್ಯಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ೧ ಸಾವಿರಕ್ಕೂ ಹೆಚ್ಚು ಮಂದಿಗೆ ವೇದಿಕೆ ಕಲ್ಪಿಸಿದ ಕಾರ್ಯ ಇದಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆಶಯಮಾತುಗಳನ್ನಾಡಿದ ಪುತ್ತೂರು ಕಸಪಾ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸಾಹಿತ್ಯದ ಪರಿಕಲ್ಪನೆ ಪುತ್ತೂರಿನಲ್ಲಿ ಅತ್ಯಂತ ಯಶಸ್ವಿಯಾಗಿದೆ. ಪುತ್ತೂರಿನಲ್ಲಿ ಕನ್ನಡಭವನ ನಿರ್ಮಾಣ ಕನಸಿದೆ. ಇದಕ್ಕೆ ಶಾಸಕ ಅಶೋಕ್ ಅವರು ಸ್ಪಂಧಿಸಿದ್ದಾರೆ. ರಾಜ್ಯದ ಬೆಂಗಳೂರನ್ನು ಹೊರತುಪಡಿಸಿದರೆ ಕಸಾಪ ವೆಬ್ ಪುತ್ತೂರಿನಲ್ಲಿ ಮಾತ್ರ ಇದೆ. ಇಡೀ ರಾಜ್ಯದಲ್ಲಿಯೇ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡುವ ಕ್ರಮ ಇಲ್ಲ. ಆದರೆ ಪುತ್ತೂರಿನಲ್ಲಿ ಮಾತ್ರ ಈ ಕ್ರಮ ಜಾರಿಯಲ್ಲಿದೆ. ಕನ್ನಡ ಭುವನೇಶ್ವರಿ ಮೆರವಣಿಗೆ ಸ್ಥಗಿತಗೊಂಡಿತ್ತು. ಈಗ ಅದನ್ನೂ ಆರಂಭಿಸಲಾಗಿದೆ. ಆದರೆ ಕಸಪಾ ಘಟಕಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವಂತಾಗಬೇಕು ಎಂದರು.
ಸಾಹಿತ್ಯೋತ್ಸವದ ಸರ್ವಾಧ್ಯಕ್ಷೆಯನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಾಯೀಶ್ವರಿ ವಹಿಸಿದ್ದರು. ಜಿಡೆಕಲ್ಲು ಕಾಲೇಜಿನ ವಿದ್ಯಾರ್ಥಿ ಜೀವನ್ ಎನ್ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಶ್ರೀನಾಥ್ ಎಂ.ಪಿ., ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ ಹಾಗೂ ದೇವಕಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ವಿವೇಕಾನಂದ ಕ.ಮಾ. ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಕ.ಸಾ.ಪ. ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್, ಬೆಂಗಳೂರು ಐಎಎಸ್ ದರ್ಶನದ ಮುಖ್ಯಸ್ಥ ದರ್ಶನ್ ಗರ್ತಿಕೆರೆ, ಕ.ಸಾ.ಪ. ಘಟಕದ ಕಾರ್ಯಕಾರಿಣಿ ಸದಸ್ಯ ಅಬೂಬಕ್ಕರ್ ಆರ್ಲಪದವು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹರ್ಷ ಕುಮಾರ್ ಮಾಡಾವು ಸ್ವಾಗತಿಸಿದರು. ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೇಯಾ ಸುಳ್ಯ ಮತ್ತು ಗಣೇಶ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.


























