Home ಜಿಲ್ಲೆ ಮಂಗಳೂರು ತೊಡಿಕಾನದಲ್ಲಿ ಮರಿಯಾನೆ ಸಾವು

ತೊಡಿಕಾನದಲ್ಲಿ ಮರಿಯಾನೆ ಸಾವು

ಸುಳ್ಯ:ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ಆನೆ ಮರಿಯೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿ ಭಾಗವಾದ ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಒಂದು ವರ್ಷದ ಪ್ರಾಯದ ಆನೆ ಮರಿ ಸಾವಿಗೀಡಾಗಿದೆ. ಭಾಗಮಂಡಲ ಮೀಸಲು ಅರಣ್ಯದಿಂದ ಆನೆಗಳ ಹಿಂಡು ಚಂದ್ರಶೇಖರ ಅವರ ರಬ್ಬರ್ ತೋಟ ಹಾಗೂ ಇತರೆ ಕೃಷಿ ಪ್ರದೇಶಕ್ಕೆ ದಾಳಿ ಇಟ್ಟಿತ್ತು. ಆನೆ ದಾಳಿಯಿಂದ ಕಾಫಿ, ಬಾಳೆ ಕೃಷಿ ನಾಶವಾಗಿದೆ. ತೋಟದ ಒಂದು ಬದಿ ಎತ್ತರದ ಗುಡ್ಡ ಪ್ರದೇಶವಾದ ಕಾರಣ ಗುಡ್ಡವನ್ನು ಹತ್ತಿ ಆನೆಗಳು ವಾಪಾಸು ಕಾಡಿಗೆ ಹೋಗುವಾಗ ಮರಿಯಾನೆಯು ಜಾರಿ ಬಿದ್ದಿರುವ ಸಾಧ್ಯತೆ ಇದೆ ಅಥವಾ ದೊಡ್ಡ ಆನೆಗಳ ಒಡೆತಕ್ಕೆ ಸಿಕ್ಕಿ ಮರಿಯಾನೆ ಸಾವಿಗೀಡಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸುಳ್ಯ ಅರಣ್ಯ ಇಲಾಖೆ ಎಸಿಎಫ್ ಪ್ರಶಾಂತ್ ಪೈ, ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ್ ಶೆಟ್ಟಿ, ತಾಲೂಕು ಪಶು ವೈದ್ಯಾಧಿಕಾರಿ ಡಾ. ನಿತೀನ್ ಪ್ರಭು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಹಜರು ನಡೆಸಿದ ಬಳಿಕ ಮರಿಯಾನೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.