
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.26: ‘ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವ ಜಿಲ್ಲಾಡಳಿತದ ಕಾರ್ಯಾಚರಣೆಯನ್ನು ಕಾಂಗ್ರೆಸ್ ವಕ್ತಾರ ವೆಂಕಟೇಶ್ ಹೆಗಡೆ ಶ್ಲಾಘಿಸಿದ್ದಾರೆ. ವಶಕ್ಕೆ ಪಡೆದ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ‘ಈಗಾಗಲೇ 500 ಕೋಟಿ ಮೌಲ್ಯದ 90 ಎಕರೆ ಜಮೀನು ವಶಪಡಿಸಿಕೊಂಡಿರುವುದು ಸ್ತುತ್ಯಾರ್ಹ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ತೆರವು ಕಾರ್ಯಾಚರಣೆ ಮುಂದುವರಿಸಬೇಕು. ಒತ್ತುವರಿದಾರರ ವಿವರಗಳನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ವಂಚನೆಗೊಳಗಾದ ಬಡವರಿಗೆ ಹಣ ಕೊಡಿಸಬೇಕು’ ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.






















