Home Uncategorized ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ.

ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ.

ಸಂಜೆವಾಣಿ ವಾರ್ತೆ

ಸಿರಿಗೇರಿ ಜುಲೈ 9. ನಮ್ಮ ಉತ್ತಮ ಜೀವನಕ್ಕಾಗಿ ಶಿಕ್ಷಣ ಒಂದು ಪ್ರಮುಖ ಅಸ್ತ್ರ, ಮತ್ತು ಇದು ಮಕ್ಕಳ ಹಕ್ಕು ಕೂಡ. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಿರುಗುಪ್ಪ ತಾಲೂಕು ಸಹಾಯಕ ನಿರ್ದೇಶಕರಾದ ಮಡ್ಡೇರುಸಿದ್ದಯ್ಯ ತಿಳಿಸಿದರು. ಮಂಗಳವಾರ ರಾತ್ರಿ, ಸಿರಿಗೇರಿ ಗ್ರಾಮದ 1ನೇ ವಾರ್ಡಿನ ಸಿಂದೋಳ ಕಾಲೋನಿಗೆ ಭೇಟಿಕೊಟ್ಟು, ಸಿಂದೋಳ ಸಮುದಾಯದ ಮಕ್ಕಳ ಪೋಷಕರಿಗೆ ಜಾಗೃತಿ ಮೂಡಿಸಿ, ಅವರ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವಂತೆ ಒತ್ತಾಯಪಡಿಸಿ, ಪೋಷಕರನ್ನು ಮಕ್ಕಳನ್ನು ಒಟ್ಟುಗೂಡಿಸಿಕೊಂಡು ಶಿಕ್ಷಣದ ಮಹತ್ವದ ಕುರಿತು, ಶಿಕ್ಷಣದಿಂದ ಜೀವನ ಸುಧಾರಿಸುವ ಕುರಿತು, ಶಿಕ್ಷಣ ಸಿಗದಿದ್ದರೆ ಮಕ್ಕಳು ದಾರಿತಪ್ಪಿ ಜೀವನ ಹಾಳು ಮಾಡಿಕೊಳ್ಳುವ ಕುರಿತು, ಶಿಕ್ಷಣ ಪಡೆದು ಸಾಧನೆ ಮಾಡಿದವರ ಕುರಿತು  ಉದಾಹರಣೆ ನೀಡಿ ಮಕ್ಕಳನ್ನು ಪ್ರತಿದಿನ ತಪ್ಪದೆ ಶಾಲೆಗೆ ಕಳಿಸಬೇಕೆಂದು ಪೋಷಕರಿಗೆ ಉತ್ತೇಜನ ನೀಡಿದರು. ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಹಳೆಕೋಟೆ ಇವರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಯಿಂದ ತಪ್ಪಿಸಬಾರದು. ಅವರು ಪ್ರತಿದಿನ ಶಾಲೆಗೆ ಹೋಗುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಶಿಕ್ಷಣಕ್ಕಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಬಳಸಿಕೊಂಡು ಮಕ್ಕಳಿಗೆ ಒಳ್ಳೆ ವಿದ್ಯೆ ಕೊಡಿಸಿ ನಿಮ್ಮ ಜೀವನ ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು. ಜನತಾ ಕಾಲೋನಿಯ ಸ.ಹಿ.ಪ್ರಾ.ಶಾಲೆಯ ಬಡ್ತಿ ಮುಖ್ಯಗುರು ಆರ್.ಶಿವಕುಮಾರ್ ರವರು  ಎಲ್ಲಾ ಮಕ್ಕಳಿಗೂ ನೋಟ್ ಪುಸ್ತಕ ನೀಡಿ, ಶಾಲೆಗೆ ಬಂದರೆ ನಿಮಗೆ ಓದು ಕಲಿಯಲು ಎಲ್ಲಾ ಸೌಲಭ್ಯ ಮಾಡಿಕೊಡಲಾಗುವುದು. ನಿಮಗೆ ಹೆಚ್ಚಿನ ಸ್ನೇಹಿತರು ಸಿಗುತ್ತಾರೆ. ಒಳ್ಳೆ ಬಟ್ಟೆಗಳನ್ನು ಹಾಕಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಆಟ ಪಾಠದೊಂದಿಗೆ ವಿದ್ಯೆ ಕಲಿತು ನಿಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ತಿಳಿಸಿದರು. ಅಧಿಕಾರಿಗಳ ಮಾತಿಗೆ ಸಮ್ಮತಿಸಿದ ಪೋಷಕರು ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಎಂದು ವಾಗ್ದಾನ ಮಾಡಿದರು ಎಂದು ಅಧಿಕಾರಿಗಳು ಮಾಹಿತಿನೀಡಿದರು. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಹೆಚ್.ಈರಣ್ಣ, ಸಿಂದೋಳ ಸಮುದಾಯದ ಮಕ್ಕಳು ಮತ್ತು ಮಕ್ಕಳ ಪೋಷಕರು ಇದ್ದರು.