
ಸಂಜೆವಾಣಿ ನ್ಯೂಸ್
ಮೈಸೂರು: ಜು.09:- ಮಹಿಳೆಯರು ಕಾಯಕಜೀವಿಗಳಾಗಿ ಬದುಕುವ ಗುರಿ ಹೊಂದಬೇಕು. ಮಹಿಳೆ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸ್ವಂತ ಶ್ರಮದಿಂದ ಸಮಾಜದಲ್ಲಿ ಪುರುಷನಂತೆ ಸಮಾನವಾಗಿ ಬದುಕಿದರೆ ದೇಶದ ಆರ್ಥಿಕತೆಗೆ ಸಹಕಾರಿಯಾಗಲಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ತಮ್ಮ ಕಚೇರಿಯ ಹೊರಾಂಗಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಒಂದು ಕಾಲದಲ್ಲಿ ಮಹಿಳೆಯರನ್ನು ಅಬಲೆಯರು ಎನ್ನುವಂತೆ ಹೇಳಲಾಗಿತ್ತು.ಈಗ ಮಹಿಳೆಯರು ಸಬಲೆಯರಾಗಿ ಕುಟುಂಬವನ್ನು ನಿರ್ವಹಣೆ ಮಾಡುವ ಜತೆಗೆ ಸಮಾಜಕ್ಕೆ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರು ಮತ್ತು ಪುರುಷರು ಕುಟುಂಬವನ್ನು ನಿರ್ವಹಣೆ ಮಾಡಲು ಕಾಯಕ ಮಾಡಬೇಕು ಎಂದರು.
ಇಂದು ದುಡಿಯಲು ಅವಕಾಶ ಇದ್ದರೂ ಯುವ ಸಮುದಾಯ ಕೆಲಸ ಮಾಡದೆ ಬೇರೆ ಬೇರೆ ಅಡ್ಡದಾರಿಗಳನ್ನು ಹಿಡಿಯಬಾರದು ಎಂದು ಸಲಹೆ ನೀಡಿದರು.
ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೆಟ್ಟ ಚಟಗಳಿಂದ ಹೆಂಡತಿಯನ್ನು ಬಿಟ್ಟುಹೋದ. ಹೆಂಡತಿ ಯೋಚನೆ ಮಾಡದೆ ಟೈಲರಿಂಗ್ ಕೆಲಸ ಮಾಡಿಕೊಂಡು ತನ್ನ ಮಕ್ಕಳನ್ನು ಓದಿಸಿ ಇಂಜಿನಿಯರಿಂಗ್ ಮಾಡಿಸಿದ್ದಾಳೆ. ಏಕಾಂಗಿಯಾಗಿ ಛಲದಿಂದ ಓದಿಸಿ ಮದುವೆ ಮಾಡಿದ್ದರಿಂದ ಇಂದು ಮಕ್ಕಳು ಮೂರು ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ ಎಂದರು.
ಮೊನ್ನೆಯಷ್ಟೇ ಐಎಎಸ್ ಆಗಬೇಕು ಎನ್ನುವ ಆಸೆಯಿಂದ ಒಬ್ಬ ವಿದ್ಯಾರ್ಥಿನಿ ನನ್ನಬಳಿ ಬಂದಿದ್ದಳು. ಆಗ ಆಕೆಗೆ ಐಎಎಸ್ ಯಾಕೆ ಮಾಡಬೇಕೆಂದು ಕೇಳಿದಾಗ ನನ್ನ ಗುರಿ ಅಂದಳು.ಆದರೆ, ಎನ್‍ಐಇ ಕಾಲೇಜಿನಲ್ಲಿ ಸೀಟು ಸಿಗಬೇಕಾದರೆ ಒಂದೂವರೆ ಲಕ್ಷ ಕಟ್ಟಬೇಕು ಅಂದಿದ್ದರಿಂದ ನಾನೇ ಕಾಲೇಜಿನ ಶುಲ್ಕ ಕಟ್ಟಿ ಪ್ರವೇಶ ಕೊಡಿಸಿದ್ದೇನೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು. ಸ್ವಂತ ಕಾಲಿನಲ್ಲಿ ನಿಲ್ಲಲು,ಸ್ವಾಭಿಮಾನದಿಂದ ಬದುಕಲು ಗುರಿಹೊಂದಬೇಕು ಎಂದರು. ಮಹಿಳೆಯರು ಸ್ವಂತ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಬೇರೆಯವರಿಗೆ ಉದ್ಯೋಗ ನೀಡುವಂತೆ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಇಂದು ಗಾರ್ಮೆಂಟ್ಸ್ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಮನೆಯಲ್ಲೇ ಬಟ್ಟೆಗಳನ್ನು ಹೊಲಿದರೆ ಕಂಪೆನಿಯವರು ಬಂದು ಪಡೆದುಕೊಂಡು ಹೋಗುತ್ತಾರೆ. ಇದರಿಂದಾಗಿ ಮನೆಯಲ್ಲಿ ಹಣ ಸಂಪಾದನೆ ಮಾಡಬಹುದು ಎಂದರು. ಹಳ್ಳಿಗಳಲ್ಲಿ ಈಗ ಎಸ್‍ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ತಮ್ಮ ಮತದ ಹಕ್ಕು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬಿಎಲ್‍ಒಗಳು ತಮ್ಮ ಮನೆಗೆ ತಂದು ಕೊಡುವ ಫಾರಂಗಳನ್ನು ಭರ್ತಿ ಮಾಡಿ ಕೊಡಬೇಕು. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಮಂಜುಳಾ,ಮೀನಾಕ್ಷಿ, ಸರೋಜಮ್ಮ, ವಸಂತ, ಸುಶೀಲ, ಜ್ಯೋತಿ,ಪ್ರಭಾವತಿ,ಶ್ವೇತಾ,ಯಶೋಧ, ನಾಗರತ್ನ, ಲಿಂಗಮ್ಮ, ನಾಗಮಣಿ, ಇಂದುಶ್ರೀ,ದೀಪಿಕಾ, ಅಲಮ್ಮ, ಛಾಯಾ, ಲಕ್ಷ್ಮೀ, ಲೀಲಮ್ಮ, ಮೂಗನಹುಂಡಿ ಮೀನಾಕ್ಷಿ, ಪೂರ್ಣಿಮಾ, ಯಶೋಧ ಮೋಹನ್, ಸೌಭಾಗ್ಯ ಗಂಗಾಧರ್ ಸೇರಿದಂತೆ 53 ಮಂದಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರವಿತರಣೆ ಮಾಡಲಾಯಿತು.
ಡಿ.ದೇವರಾಜ ಅರಸು ಅಭಿವೃದ್ದಿನಿಗಮದ ಜಿಲ್ಲಾ ವ್ಯವಸ್ಥಾಪಕ ತೇಜಸ್‍ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿರುವ ತಮ್ಮ ಕಚೇರಿಯ ಹೊರಾಂಗಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಜಿ.ಟಿ.ದೇವೇಗೌಡ ವಿತರಿಸಿದರು.






























