
ಸಂಜೆವಾಣಿ ನ್ಯೂಸ್
ಮೈಸೂರು,ಆ.06: ನಗರದಲ್ಲಿ ಉತ್ಪತ್ತಿಯಾಗುವ ಬಳಕೆಯಾದ ಬ್ಯಾಟರಿಗಳ ವೈಜ್ಞಾನಿಕ ನಿರ್ವಹಣೆಗಾಗಿ ಮೈಸೂರು ಮಹಾನಗರ ಪಾಲಿಕೆಯು ಎವರೆಡಿ ಬ್ಯಾಟರೀಸ್ ಸಂಸ್ಥೆಯೊಂದಿಗೆ ತಿಳಿವಳಿಕೆ ಒಡಂಬಡಿಕೆಗೆ – ಒoU ಸಹಿ ಹಾಕಿದೆ.
ಬ್ಯಾಟರಿ ತ್ಯಾಜ್ಯ ನಿರ್ವಹಣಾ ನಿಯಮಗಳ ಸಮರ್ಪಕ ಅನುಷ್ಠಾನ ಮತ್ತು ಬಳಕೆಯಾದ ಬ್ಯಾಟರಿಗಳನ್ನು ಸಾಮಾನ್ಯ ಘನತ್ಯಾಜ್ಯದೊಂದಿಗೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಂಗ್ರಹಿಸುವುದು ಈ ಒಡಂಬಡಿಕೆಯ ಪ್ರಮುಖ ಉದ್ದೇಶವಾಗಿದೆ. ಸಂಗ್ರಹಿಸಿದ ಬ್ಯಾಟರಿಗಳನ್ನು ಅಧಿಕೃತ ಹಾಗೂ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಸಾಗಣೆ, ಮರುಸಂಸ್ಕರಣೆ ಮತ್ತು ಸುರಕ್ಷಿತ ವಿಲೇವಾರಿ ಮಾಡಲಾಗುವುದು.
ಈ ರೀತಿಯ ಒಡಂಬಡಿಕೆಗೆ ಸಹಿ ಹಾಕಿರುವ ಕರ್ನಾಟಕದ ಪ್ರಥಮ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ಒಂದಾಗಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಉಪಕ್ರಮ ಮಹತ್ವದ್ದಾಗಿದೆ ಎಂದು ಪಾಲಿಕೆ ತಿಳಿಸಿದೆ.
ಒಡಂಬಡಿಕೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ., ಕಾರ್ಯಪಾಲಕ ಅಭಿಯಂತರ (ಪರಿಸರ) ಮೃತ್ಯುಂಜಯ ಕೆ.ಎಸ್., ಎವರೆಡಿ ಬ್ಯಾಟರೀಸ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಪ್ರಸಾದ್ ತಂತ್ರಿ ಹಾಗೂ ವ್ಯವಸ್ಥಾಪಕ ನಾಗೇಶ್ ಎಸ್. ಉಪಸ್ಥಿತರಿದ್ದರು.
ಈ ಒಡಂಬಡಿಕೆಯಡಿ ಸಾರ್ವಜನಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ವಿವಿಧ ಘಟಕಗಳಿಂದ ಉತ್ಪತ್ತಿಯಾಗುವ ಬಳಕೆಯಾದ ಬ್ಯಾಟರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಅಧಿಕೃತ ಸಂಗ್ರಹಣಾ ವ್ಯವಸ್ಥೆಯ ಮೂಲಕ ಮಾನ್ಯತೆ ಪಡೆದ ಮರುಸಂಸ್ಕರಣಾ ಸಂಸ್ಥೆಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಟರಿ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ ಮತ್ತು ಆರೋಗ್ಯ ಹಾನಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.
ಮೈಸೂರು ನಗರವನ್ನು ಸ್ವಚ್ಛ, ಸುರಕ್ಷಿತ ಮತ್ತು ಪರಿಸರಸ್ನೇಹಿ ನಗರವನ್ನಾಗಿಸುವ ನಿಟ್ಟಿನಲ್ಲಿ ಈ ಸಹಭಾಗಿತ್ವವು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಬ್ಯಾಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪಾಲಿಕೆ ಸೂಚಿಸುವ ಅಧಿಕೃತ ವ್ಯವಸ್ಥೆಗೆ ಹಸ್ತಾಂತರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರು ಹಾಗೂ ಸಂಸ್ಥೆಗಳಿಗೆ ಮನವಿ ಮಾಡಿದೆ.

































