
ಸಂಜೆವಾಣಿ ವಾರ್ತೆ
ಸಂಡೂರು :ಜೂ:29 ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನದ ಅಂಗವಾಗಿ ಸಂಡೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಅನ್ನಪೂರ್ಣ ಈ ತುಕಾರಾಂ ಭಾಗವಹಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಅನ್ನಪೂರ್ಣತಿ ಈ ತುಕಾರಾಂ ಅವರು, “ಪೋಲಿಯೋ ಮುಕ್ತ ಭಾರತ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕು. ಪೋಲಿಯೋ ಎಂಬ ಮಾರಕ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬ ಪೋಷಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಬೇಕು” ಎಂದು ಕರೆ ನೀಡಿದರು.
ಆರೋಗ್ಯವಂತ ಮಕ್ಕಳು ದೇಶದ ಭವಿಷ್ಯದ ಶಕ್ತಿಯಾಗಿದ್ದು, ಅವರ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆರೋಗ್ಯವಂತ ಮಕ್ಕಳೇ ದೇಶದ ಅಮೂಲ್ಯ ಸಂಪತ್ತು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು. ಸರ್ಕಾರದ ಆರೋಗ್ಯ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವ ಮೂಲಕ ಸಮಾಜವನ್ನು ರೋಗಮುಕ್ತವಾಗಿಸುವಲ್ಲಿ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
























