
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ 26: ನಗರದ ಗಾಂಧಿನಗರ ಪೊಲೀಸ್ ಠಾಣೆ ವತಿಯಿಂದ ಪೊಲೀಸ್–ಸಾರ್ವಜನಿಕರ ಸಮನ್ವಯ ಸಭೆಯನ್ನು ಆಯೋಜಿಸಿ ಸಾರ್ವಜನಿಕರ ಸಮಸ್ಯೆಗಳು ಹಾಗೂ ಸ್ಥಳೀಯ ಕುಂದುಕೊರತೆಗಳ ಕುರಿತು ಚರ್ಚಿಸಲಾಯಿತು.
ಸಿದ್ಧಾರ್ಥ ಕಾಲೋನಿಯ ಎಸ್ಸಿ/ಎಸ್ಟಿ ಮುಖಂಡರನ್ನು ಆಹ್ವಾನಿಸಿ ನಡೆದ ಸಭೆಯಲ್ಲಿ ಪ್ರದೇಶದ ಮೂಲಭೂತ ಸೌಲಭ್ಯಗಳು, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ನಡೆಯಿತು. ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಮಾತನಾಡಿದ ಗಾಂಧಿನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿಚಂದ್ರ, ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು. ಸುರಕ್ಷಿತ ವಾಹನ ಚಾಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಮೂಲ್ಯ ಜೀವಗಳನ್ನು ರಕ್ಷಿಸಬಹುದು ಎಂದು ಹೇಳಿದರು.
ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಇಂತಹ ಸಮನ್ವಯ ಸಭೆಗಳು ಅಗತ್ಯವಾಗಿದ್ದು, ಜನರು ಯಾವುದೇ ಸಮಸ್ಯೆಗಳಿದ್ದರೂ ನಿರ್ಭಯವಾಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.






















