Home ಸಿನೆಮಾ `ನಾನು ಕರುಣಾಕರ’ ಟ್ರೈಲರ್ ಬಿಡುಗಡೆ

`ನಾನು ಕರುಣಾಕರ’ ಟ್ರೈಲರ್ ಬಿಡುಗಡೆ

ಅಪ್ಪ–ಮಗನ ಬಾಂಧವ್ಯಕ್ಕೆ ಹೃದಯ ಸ್ಪರ್ಶಿ ಕಥೆ!

ಭಾವನಾತ್ಮಕ ಕುಟುಂಬ ಕಥೆಯೊಂದಿಗೆ ‘ನಾನು ಕರುಣಾಕರ’ ಸಿನಿಮಾ ಇದೀಗ ಟ್ರೈಲರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಅಪ್ಪ–ಮಗನ ಸಂಬಂಧದ ಸೂಕ್ಷ್ಮತೆಯನ್ನು ತೆರೆಗೆ ತರುತ್ತಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಆರ್ಯನ್ ತೇಜಸ್, ಈ ಹಿಂದೆ ‘ಪಾರ್ಕ್ ರೋಡ್ 100 ರೂಪಾಯಿ’ ಚಿತ್ರದ ಮೂಲಕ ಗಮನ ಸೆಳೆದಿದ್ದರು. ಈ ಕಥೆಯನ್ನು ಕೊರೊನಾಗೂ ಮುನ್ನವೇ ಸಿದ್ಧಪಡಿಸಿದ್ದ ಅವರು, ಸ್ನೇಹಿತ ನಮನ್ ನಾರಾಯಣ್ ಅವರಿಗೆ ಹೇಳಿದಾಗ ಚಿತ್ರ ನಿರ್ಮಾಣಕ್ಕೆ ಚಾಲನೆ ದೊರಕಿತು.

ಕನ್ನಡಕ್ಕೆ ಒಳ್ಳೆಯ ಕಂಟೆಂಟ್ ಕೊಡಬೇಕು ಎಂಬ ಉದ್ದೇಶದಿಂದ ವೈಭವ್ ಸುರೇಶ್, ನಮನ್ ನಾರಾಯಣ್ ಹಾಗೂ ತಂಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪಾಪ್ ಕಾರ್ನ್ ಸಿನಿಮಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರ ಏಪ್ರಿಲ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಆರ್ಯನ್ ತೇಜಸ್ ನಾಯಕನಾಗಿ, ಅವರ ಪತ್ನಿಯಾಗಿ ‘ಭಾರ್ಗವಿ ಎಲ್ ಎಲ್ ಬಿ’ ಖ್ಯಾತಿಯ ರಾಧಾ ಭಗವತಿ ಹಾಗೂ ಮಗನ ಪಾತ್ರದಲ್ಲಿ ಮಾಸ್ಟರ್ ಭವೀಶ್ ಕಾಣಿಸಿಕೊಂಡಿದ್ದಾರೆ. ಕರಿಸುಬ್ಬು, ಎಂಕೆ ಮಠ, ಬಿ.ಎಂ. ವೆಂಕಟೇಶ್, ಅಪೂರ್ವ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರದ ಕಥೆ ಮಧ್ಯಮ ವರ್ಗದ ಕುಟುಂಬದ ಸುತ್ತ ಹೆಣೆದಿದ್ದು, ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ತನ್ನ ಕುಟುಂಬವನ್ನು ಸಾಗಿಸಲು ಎದುರಿಸುವ ಸಂಕಷ್ಟಗಳನ್ನು ತೆರೆದಿಡುತ್ತದೆ. ಮೈಸೂರು, ಮೇಲುಕೋಟೆ ಮತ್ತು ಬೆಂಗಳೂರಿನ ಯಲಹಂಕ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ನಾಯಕಿ ರಾಧಾ ಭಗವತಿ ಮಧ್ಯಮ ವರ್ಗದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದು, ತನ್ನ ಕನಸುಗಳನ್ನು ಬದಿಗೊತ್ತಿ ಕುಟುಂಬಕ್ಕಾಗಿ ಬದುಕುವ ಮಹಿಳೆಯ ಭಾವನೆಗಳನ್ನು ಮೂಡಿಸಿದ್ದಾರೆ. ನಿರ್ಮಾಪಕರು ಈ ಚಿತ್ರವನ್ನು ಎಲ್ಲಾ ತಂದೆಗಳಿಗೆ ಸಮರ್ಪಿಸಿದ್ದು, ಟ್ರೈಲರ್‌ಗೆ ಶ್ರೀನಗರ ಕಿಟ್ಟಿ ಧ್ವನಿ ನೀಡಿರುವುದು ವಿಶೇಷ ಆಕರ್ಷಣೆಯಾಗಿದೆ.