
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.09: ನಗರದ ತಾಲ್ಲೂಕು ಕಛೇರಿ, ತಾಲೂಕು ಪಂಚಾಯಿತಿ ಹಾಗೂ ಸಿ.ಡಿ.ಪಿ.ಕ ಇಲಾಖೆಯ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಎಸ್.ಐ.ಆರ್ ಜಾಗೃತಿಯ ಕುರಿತು ಜಾಥಾ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಮಾತನಾಡಿ, ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯಬಾರದು ಹಾಗೂ ಒಬ್ಬ ಮತದಾರರು ಹಲವು ಕಡೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸದನ್ನು ತಡೆಯಲು ಈ ಎಸ್.ಐ.ಆರ್ ಮಾಡಲಾಗಿದೆ ಎಂದರು.
ಮತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಎನ್ಯುಮರೇಷನ್ ಅರ್ಜಿ ನೀಡಲಿದ್ದು, ಅದರಲ್ಲಿ ಸರಿಯಾದ ಮಾಹಿತಿ ಭರ್ತಿ ಮಾಡತಕ್ಕದ್ದು, ಈ ಪರಿಷ್ಕರಣೆಯು ಜುಲೈ-29 ರ ವರೆಗೆ ನೆಡೆಯುತ್ತದೆ. ನಂತರ ಅರ್ಹ ಮತದಾರರ ಕರಡು ಪ್ರತಿ ಬಿಡುಗಡೆ ಮಾಡಲಿದೆ ಮತ್ತು ರಂಗೋಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲ್ಲೂಕಿನ ಎಲ್ಲಾ ಎನ್.ಆರ್.ಎಲ್.ಎಂ ಸಿಬ್ಬಂದಿಗಳು ತಾಲೂಕಿನ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಈ ಕುರಿತು ಮಾಹಿತಿ ನೀಡಲು ತಿಳಿಸಿದರು.
ಪಾಲ್ಗೊಂಡವರೆಲ್ಲರೂ ಆಕರ್ಷಕರಂಗೋಲಿಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅಭಿಯಾನವನ್ನು ಸಂಭ್ರಮಿಸಿದರು.
ತಾಲೂಕು ಯೋಜನಾಧಿಕಾರಿ ಶಂಕರ್, ತಾಲೂಕು ಕಚೇರಿಯ ಚುನಾವಣಾ ಸಿಬ್ಬಂದಿ ಮಹಾಂತೇಶ್, ಸಿಡಿಪಿಓ ಕಚೇರಿಯ ಮೇಲ್ವಿಚಾರಕ ಮಹಾದೇವಿ, ತಾಲೂಕು ಪಂಚಾಯಿತಿ ಸಿಬ್ಬಂದಿ ನಾಗರತ್ನಮ್ಮ, ಎನ್ಎಲ್ಆರ್ಎಂ ಯೋಜನೆಯ ಅಧಿಕಾರಿಗಳು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಇದ್ದರು.






























