
‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಮುಹೂರ್ತ;
25 ವರ್ಷಗಳ ಬಳಿಕ ನಟನಾಗಿ ಮರಳಿದ ಸಿ.ಪಿ. ಯೋಗೀಶ್ವರ್
ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನಾಗಿ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಪಿ.ಎಂ.ಜಿ ಫಿಲಂ ಫ್ಯಾಕ್ಟರಿ ನಿರ್ಮಿಸುತ್ತಿರುವ ‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ ಚಿತ್ರಗಳ ಮೂಲಕ ಅವರು ನಾಯಕನಾಗಿ ಪರಿಚಯವಾಗುತ್ತಿದ್ದು, ಇದೇ ವೇಳೆ 25 ವರ್ಷಗಳ ಬಳಿಕ ಸಿ.ಪಿ. ಯೋಗೀಶ್ವರ್ ನಟನಾಗಿ ಮರಳುತ್ತಿರುವುದು ವಿಶೇಷ. ಎರಡೂ ಚಿತ್ರಗಳ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಚಿತ್ರಗಳ ಫಸ್ಟ್ ಲುಕ್ ಟೀಸರ್ ಕೂಡ ಅನಾವರಣಗೊಂಡಿತು.
ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ‘ಸೈನಿಕ 2’ ಚಿತ್ರಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರೆ, ಬೆಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಕ್ಯಾಮೆರಾ ಚಾಲನೆ ಮಾಡಿದರು. ಮಾಜಿ ಸಚಿವ ಡಾ. ಕೆ. ಸುಧಾಕರ್, ಶಾಸಕರು ಉದಯ್, ರವಿ, ಮೋಹನ್, ಸಾ.ರಾ. ಗೋವಿಂದು, ವಿಶ್ವಪ್ರಸಾದ್, ರಾಕ್ಲೈನ್ ವೆಂಕಟೇಶ್, ಲಹರಿ ವೇಲು, ಸಂತೋಷ್ ಆನಂದರಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ನಾನು ಸಾಮಾನ್ಯವಾಗಿ ಮುಹೂರ್ತ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಯೋಗೀಶ್ವರ್ ಅವರ ಆಹ್ವಾನಕ್ಕೆ ಬಂದಿದ್ದೇನೆ. ಧ್ಯಾನ್ ಟೀಸರ್ನಲ್ಲಿ ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿದ್ದು, ಉತ್ತಮ ತಯಾರಿಯೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅವರ ಭವಿಷ್ಯ ಉಜ್ವಲವಾಗಿರಲಿ” ಎಂದು ಡಿ.ಕೆ. ಶಿವಕುಮಾರ್ ಹಾರೈಸಿದರು.
“ಸಿ.ಪಿ. ಯೋಗೀಶ್ವರ್ ನನ್ನ ಹಲವು ವರ್ಷಗಳ ಸ್ನೇಹಿತರು. ಅವರು ಹಾಗೂ ಅವರ ಪುತ್ರ ನಟಿಸುತ್ತಿರುವ ‘ಸೈನಿಕ 2’ಗೆ ಚಾಲನೆ ನೀಡಿರುವುದು ಸಂತೋಷದ ಸಂಗತಿ. ಎರಡೂ ಚಿತ್ರಗಳು ಯಶಸ್ವಿಯಾಗಲಿ” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಶುಭ ಹಾರೈಸಿದರು.
“ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿಯ ಸಂಗತಿ. ಈ ಅವಕಾಶ ನೀಡಿದ ತಂದೆ-ತಾಯಿಗೆ ಋಣಿ. ನಾಗಣ್ಣ ಹಾಗೂ ಪುನೀತ್ ರುದ್ರನಾಗ್ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಕಲಿಯುತ್ತಿದ್ದೇನೆ. ಪ್ರೇಕ್ಷಕರ ಆಶೀರ್ವಾದವೇ ನನ್ನ ದೊಡ್ಡ ಶಕ್ತಿ” ಎಂದು ಧ್ಯಾನ್ ಯೋಗೀಶ್ವರ್ ಹೇಳಿದರು.
“‘ಕರ್ಣಾಟಬಲಂ ಅಜೇಯಂ’ ಎರಡು ಕಾಲಘಟ್ಟಗಳಲ್ಲಿ ಸಾಗುವ ಕಥೆ. ಯೋಗೀಶ್ವರ್ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಎಂ.ಎಸ್. ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಕಥಾವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ” ಎಂದು ನಿರ್ದೇಶಕ ನಾಗಣ್ಣ ಮಾಹಿತಿ ನೀಡಿದರು.
“‘ಸೈನಿಕ’ ಬಿಡುಗಡೆಯಾಗುವಾಗ ನಾನು ಹದಿನಾರು ವರ್ಷದವನಾಗಿದ್ದೆ. ಈಗ ಅದರ ಎರಡನೇ ಭಾಗವನ್ನು ನಿರ್ದೇಶಿಸುತ್ತಿರುವುದು ಹೆಮ್ಮೆ. ಇದು ನೈಜ ಘಟನೆಗಳ ಸ್ಫೂರ್ತಿಯ ಕಥೆಯಾಗಿದ್ದು, ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದೆ” ಎಂದು ನಿರ್ದೇಶಕ ಪುನೀತ್ ರುದ್ರನಾಗ್ ಹೇಳಿದರು.
ಕಾರ್ಯಕಾರಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಟ ಜಗಪತಿಬಾಬು, ಸುಮಾರು ಎರಡು ದಶಕಗಳ ಬಳಿಕ ಕನ್ನಡಕ್ಕೆ ಮರಳಿರುವ ನಟಿ ಲಯ, ನಾಯಕಿಯರಾದ ಮಣಿಕ ವಿಶ್ವಕರ್ಮ ಹಾಗೂ ರೇಖಾ ಪಾಂಡೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಛಾಯಾಗ್ರಾಹಕ ಶೇಖರ್ ಚಂದ್ರ ಮತ್ತು ಸಂಕೇತ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕರ್ಣಾಟಬಲಂ ಅಜೇಯಂ’ ಕನ್ನಡದ ಮಣ್ಣಿನ ಕಥೆಯಾಗಿದ್ದು, ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡುವ ಗುರಿಯಿದೆ. ನನ್ನ ಮಗ ಉತ್ತಮ ತಯಾರಿಯೊಂದಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ” -ಸಿ.ಪಿ. ಯೋಗೀಶ್ವರ್
“‘ಕರ್ಣಾಟಬಲಂ ಅಜೇಯಂ’ ಎರಡು ಕಾಲಘಟ್ಟಗಳಲ್ಲಿ ಸಾಗುವ ಕಥೆ. ಆರನೇ ಶತಮಾನದಲ್ಲಿನ ಬಾದಾಮಿ ಮತ್ತು ಇಂದಿನ ಬಾದಾಮಿಯ ವೈಭವವನ್ನು ಚಿತ್ರದಲ್ಲಿ ಅನಾವರಣಗೊಳಿಸುತ್ತಿದ್ದೇವೆ. – ನಾಗಣ್ಣ, ನಿರ್ದೇಶಕ



























