
ಲಕ್ಷ್ಮೇಶ್ವರ,ಏ8: ಪಟ್ಟಣದ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಕಳೆದ 3 ದಿನಗಳಿಂದ ದೇವಸ್ಥಾನದ ಬಯಲಿನಲ್ಲಿ ಮುಕ್ತ ಕುಸ್ತಿ ಪಂದ್ಯಾವಳಿಗಳು ನಡೆದವು.
ಸೋಮವಾರ ಪೈನಲ್ ಗೋಧೋಳಿ ಸಮಯದಲ್ಲಿ ನಡೆದ ವಾರಗಿ ಪೈಕಿ-ಪರಸಿ ಪೈಕಿ ಕುಸ್ತಿ ಅಂತಿಮ ಪಂದ್ಯಾವಳಿಯಲ್ಲಿ ಲಕ್ಕುಂಡಿಯ ಪೈಲ್ವಾನ್ ಮುತ್ತು ಭಾವಿ ಗೆಲುವಿನ ಖಡಗದೊಂದಿಗೆ ವಿಜಯ ಮಾಲೆ ಧರಿಸಿದರು.
ಮೊದಲು ವಾರಿಗಿ ಪೈಕಿ ಕುಸ್ತಿಯಲ್ಲಿ ಲಕ್ಕುಂಡಿಯ ಮುತ್ತು ಬಾವಿ ಪೈಲ್ವಾನ್ ಹಾಗೂ ಯಳವಟ್ಟಿಯ ಶಿದ್ದಲಿಂಗೇಶ ಈ ಇಬ್ಬರ ನಡುವೆ ನಡೆದ ಕಾದಾಟದಲ್ಲಿ ಲಕ್ಕುಂಡಿಯ ಮುತ್ತು ಬಾವಿ ಪೈಲ್ವಾನ್ ಜಯಶಾಲಿಯಾಗಿ ಬೆಳ್ಳಿ ಕಡಗ ಮತ್ತು ನಗದು ತಮ್ಮದಾಗಿಸಿಕೊಂಡರು. ನಂತರ ಪರಸಿ ಪೈಕಿ ಕುಸ್ತಿಯಲ್ಲಿ ಮುತ್ತು ಬಾವಿ ಹಾಗೂ ಬೊಮ್ಮನಹಳ್ಳಿಯ ನಿಂಗಪ್ಪ ಇಬ್ಬರು ಮದಗಜಗಳ ನಡುವೆ 40 ನಿಮಿಷಗಳ ಕಾಲ ನಡೆದ ರೋಚಕ ಕಾಳದಲ್ಲಿ ಮತ್ತೆ ಮುತ್ತು ಪೈಲ್ವಾನ್ ಕೈ ಮೇಲಾಯಿತು.
ಸೆಣಸಿದ ಕಲಿಗಳ ವಿವಿಧ ಭಂಗಿ, ಪಟ್ಟು, ಕರಾಮತ್ತುಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು. ಸ್ಥಳೀಯ ಪೈಲ್ವಾನರು ಸೇರಿದಂತೆ ಲಕ್ಕುಂಡಿ ಹಾವೇರಿ ಬೊಮ್ಮನಹಳ್ಳಿ ಧಾರವಾಡ, ಹೂವಿಲಗೋಳ ಹನುಮನಾಳ ಶಿರಹಟ್ಟಿ ಬಾಳೆಹೊಸೂರ ರಾಣಿಬೆನ್ನೂರ ಬ್ಯಾಡಗಿ, ಬಡಮಲ್ಲಿ, ಕಲಘಟಗಿ ಸೇರಿ ಅನೇಕ ಕಡೆಗಳಿಂದ 40 ಕ್ಕೂ ಹೆಚ್ಚು ಜೋಡಿಗಳು ಕುಸ್ತಿಯಲ್ಲಿ ಸೆಣಸಾಡಿಸಿದರು.
ಸಂಜೆ ಬಹುಮಾನ ಸ್ವೀಕರಿಸಿ ಮಾತನಾಡಿದ ಲಕ್ಕುಂಡಿಯ ಮುತ್ತು ಬಾವಿ ಪೈಲ್ವಾನ್ ಅವರು ಕುಸ್ತಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಶೈಲಿಯ ಗ್ರಾಮೀಣ ಕ್ರೀಡೆಯಾಗಿದೆ. ನಮ್ಮ ಸಂಸ್ಕತಿ, ಪರಂಪರೆಯ ಪ್ರತೀಕವಾದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿರುವ ಈ ಕುಸ್ತಿ ಪಂದ್ಯಾವಳಿಯನ್ನು ದೇವಸ್ಥಾನ ಸೇವಾ ಕಮೀಟಿ, ಭಕ್ತಮಂಡಳಿ, ಪಟ್ಟಣದ ಹಿರಿಯರು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಮತ್ತು ನಮ್ಮಂತಹ ಗ್ರಾಮೀಣ ಕುಸ್ತಿ ಪಟುಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಕಮೀಟಿಯವರು, ಪಟ್ಟಣದ ಹಿರಿಯರು, ಪೈಲ್ವಾನರು, ಕುಸ್ತಿ ಪ್ರೇಮಿಗಳು ಇದ್ದರು.






















