
ಸುರೇಶ್ ಬಿಜನಳ್ಳಿ
ಸೇಡಂ,ಮೇ,02: ನಗರದ ಸೌಂದರ್ಯ ಮತ್ತು ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ನಿರ್ಮಿಸಲಾದ ಪಾದಚಾರಿ ಮಾರ್ಗಗಳು ಇಂದು ವ್ಯಾಪಾರಿಗಳ ಸ್ವತ್ತಾಗಿ ಮಾರ್ಪಟ್ಟಿವೆ. ರಸ್ತೆಗಿಂತ ಫುಟ್‍ಪಾತ್‍ಗಳೇ ಹೆಚ್ಚು ಜನನಿಬಿಡವಾಗಿವೆ,ಆದರೆ ಅಲ್ಲಿ ನಡೆಯುತ್ತಿರುವುದು ಪಾದಚಾರಿಗಳಲ್ಲ,ಬದಲಾಗಿ ವ್ಯವಹಾರ! ಇಷ್ಟೆಲ್ಲಾ ಅವಾಂತರಗಳು ಕಣ್ಣೆದುರೇ ನಡೆಯುತ್ತಿದ್ದರೂ ನಗರಸಭೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದೆಯೇ?” ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ. ನಡೆಯಲು ಜಾಗವಿಲ್ಲ ಬದುಕಲು ದಾರಿಯಿಲ್ಲ ಎಂಬಂತಾಗಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು ಅಕ್ಷರಶಃ ಮಾಯವಾಗಿವೆ. ಹೋಟೆಲ್‍ಗಳ ಬೋರ್ಡ್‍ಗಳು, ಬಟ್ಟೆ ಅಂಗಡಿಗಳ ಸ್ಟ್ಯಾಂಡ್‍ಗಳು, ಮತ್ತು ತಳ್ಳುಗಾಡಿಗಳು ಫುಟ್‍ಪಾತ್‍ಗಳನ್ನು ಆಕ್ರಮಿಸಿಕೊಂಡಿವೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯ ಮಧ್ಯೆ ನಡೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಬಸವೇಶ್ವರ ವೃತ್ತದಿಂದ ಬಸ್ ಸ್ಟಾಂಡ್ ಅವರಿಗೆ ಫುಟ್‍ಪಾತ್ ಕಾಮಗಾರಿ ಮಾಡಲಾಗುತ್ತಿದ್ದು ಫುಟ್‍ಪಾತ್ ಇಲ್ಲದ ಕಾರಣ ರಸ್ತೆಯಲ್ಲಿ ನಡೆಯು ಸಂದರ್ಭವು ಒದಗಿ ಬಂದಿದ್ದು ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಸಾರ್ವಜನಿಕ ವೃತ್ತ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳು (ಫುಟ್‍ಪಾತ್) ವ್ಯಾಪಕವಾಗಿ ಒತ್ತುವರಿಯಾಗುತ್ತಿರುವುದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿತ್ತಿದ್ದು ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.ಪಾದಚಾರಿಗಳ ಹಕ್ಕು ಅತಿಕ್ರಮಣ ಲಾಗುತ್ತಿದೆ ನಗರದ ಬಹುತೇಕ ರಸ್ತೆಗಳ ಪಕ್ಕದಲ್ಲಿರುವ ಪಾದಚಾರಿ ಮಾರ್ಗಗಳನ್ನು ವ್ಯಾಪಾರಸ್ಥರು ತಮ್ಮ ಮಳಿಗೆಯ ವಿಸ್ತರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ.ಹೂವು ಹಣ್ಣು ಮಾರಾಟಗಾರರು, ತಳ್ಳುಗಾಡಿಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಫುಟ್‍ಪಾತ್ ಮೇಲೆಯೇ ಹರಡಿರುವುದರಿಂದ ಜನರು ಓಡಾಡಲು ಜಾಗವಿಲ್ಲದಂತಾಗಿದೆ. ಸಾರ್ವಜನಿಕರು ಅಪಘಾತಗಳ ಭೀತಿಯಲ್ಲಿ ಫುಟ್‍ಪಾತ್ ಬಿಟ್ಟು ರಸ್ತೆಯ ಮಧ್ಯದಲ್ಲೇ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ವಾಹನಗಳ ದಟ್ಟಣೆಯ ನಡುವೆ ಪಾದಚಾರಿಗಳು ಸಿಲುಕುತ್ತಿದ್ದು, ಸಣ್ಣಪುಟ್ಟ ಅಪಘಾತಗಳು ನಿತ್ಯ ನಡೆಯುತ್ತಿವೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ರಸ್ತೆಯಲ್ಲಿ ಸಂಚರಿಸುವುದು ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ, ಜೊತೆಗೆ ಫುಟ್ ಪಾತ್ ಮೇಲೆ ಇರುವ ಅಂಗಡಿಯಿಂದ ಪಡೆಯುವಂತ ವಸ್ತುವಿಗಾಗಿ ಗ್ರಾಹಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದಲು ತೊಂದರೆ ಅನುಭವಿಸುವಂತಾಗಿದೆ ಎಂದು ನಗರ ನಿವಾಸಿಗರು ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಯ ಪೌರಾಯುಕ್ತರು ಆಡಳಿತಾಧಿಕಾರಿಗಳು ಇನ್ನು ಮುಂದಾದರೂ ಎಸಿ ರೂಮಿನಿಂದ ಹೊರಬಂದು ವಾಸ್ತವ ಸ್ಥಿತಿಯನ್ನು ಅವಲೋಕಿಸಿ, ಜನರ ಜೀವ ರಕ್ಷಿಸಲು ಮುಂದಾಗಬೇಕಿದೆ. ಪಾದಚಾರಿಗಳ ಹಕ್ಕನ್ನು ಅವರಿಗೆ ಮರಳಿಸುವುದು ನಗರಸಭೆಯ ಆದ್ಯ ಕರ್ತವ್ಯವಾಗಿದೆ.
ಸಾರ್ವಜನಿಕರ ಪ್ರಮುಖ ಬೇಡಿಕೆಗಳು:
ತಕ್ಷಣದ ತೆರವು ಕಾರ್ಯಾಚರಣೆ ಮೂಲಕ ಎಲ್ಲಾ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿನ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು.ನಿಯಮ ಉಲ್ಲಂಘಿಸಿ ಫುಟ್‍ಪಾತ್ ಆಕ್ರಮಿಸುವ ವ್ಯಾಪಾರಿಗಳ ಮೇಲೆ ಕಠಿಣ ದಂಡ ವಿಧಿಸಬೇಕು.ಒತ್ತುವರಿ ತೆರವುಗೊಳಿಸಿದ ನಂತರ ಮತ್ತೆ ಅಲ್ಲಿ ಅಂಗಡಿಗಳು ತಲೆ ಎತ್ತದಂತೆ ನಗರಸಭೆ ನಿಗಾ ವಹಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿರುವ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಫುಟ್‍ಪಾತ್‍ಗಳನ್ನು (ಪಾದಚಾರಿ ಮಾರ್ಗ) ಬೀದಿ ಬದಿ ವ್ಯಾಪಾರಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.ವಿಶೇಷವಾಗಿ ನಗರದ ಬಸ್ ನಿಲ್ದಾಣದ ಹತ್ತಿರ, ನಗರಸಭೆ ಕಚೇರಿ ಆವರಣ, ಸರ್ಕಾರಿ ಆಸ್ಪತ್ರೆ ರಸ್ತೆ ಹಾಗೂ ಚೌರಸ್ತಾದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗಗಳಲ್ಲಿ ಹಣ್ಣಿನ ವ್ಯಾಪಾರಿಗಳು, ಪಾನಿಪೂರಿ ಮತ್ತು ಚಾಟ್ಸ್ ಗಾಡಿಗಳು ಹಾಗೂ ಟೀ ಸ್ಟಾಲ್‍ಗಳು ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರು ಮತ್ತು ಪಾದಚಾರಿಗಳು ರಸ್ತೆಯ ಮೇಲೆ ನಡೆಯುವಂತಾಗಿದ್ದು ಪ್ರತಿದಿನ ಸಂಚಾರ ದಟ್ಟಣೆ ಮತ್ತು ಅಪಘಾತಗಳು ಸಂಭವಿಸುತ್ತಿವೆ ತಡೆಯುವ ಪ್ರಯತ್ನ ನಗರಸಭೆಯಿಂದ ಮಾಡಲಿ.
ಶಂಕ್ರಪ್ಪ ಕೆ ರಾವ್ ಯುವ ವಕೀಲರು ಸೇಡಂ
ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಹಿರಿಯ ನಾಗರಿಕರು ಶಾಲಾ ಮಕ್ಕಳು ಆ ಭಾಗದಲ್ಲಿ ಓಡಾಡಲು ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಗರಸಭೆ ಪೌರಾಯುಕ್ತರು ಕೂಡಲೇ ಕ್ರಮ ಕೈಗೊಂಡು,ಅಕ್ರಮ ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ವರದಾಸ್ವಾಮಿ ಬಿ ಹಿರೇಮಠ
ಉಪಾಧ್ಯಕ್ಷರು ಜಯ ಕರ್ನಾಟಕ ಜನಪರ ವೇದಿಕೆ ಕಲಬುರ್ಗಿ
ನಾವೇನು ತೆರಿಗೆ ಕಟ್ಟುತ್ತಿಲ್ಲವೇ? ನಮಗೆ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯುವ ಹಕ್ಕಿಲ್ಲವೇ? ದೊಡ್ಡ ಅನಾಹುತ ಸಂಭವಿಸಿ ಪ್ರಾಣಹಾನಿಯಾದ ಮೇಲೆ ನಗರಸಭೆ ಎಚ್ಚೆತ್ತುಕೊಳ್ಳುತ್ತದೆಯೇ?
ಹೆಸರು ಹೇಳದ ನಗರದ ನಿವಾಸಿ ಅಭಿಪ್ರಾಯ






















