
ಯಾದಗಿರಿ:ಏ.೩೦: ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಬೇಸಿಗೆ ಆರಂಭವಾಗಿ ಮೂರು ತಿಂಗಳು ಕಳೆದರೂ ಜನರು ಮತ್ತು ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ನದಿಗಳು, ಹಳ್ಳ-ಕೊಳ್ಳಗಳು ಬತ್ತಿ ಹೋಗಿವೆ. ಅನೇಕ ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ವರ್ಷಗಳಿಂದ ದುರಸ್ತಿಗೆ ಬಾರದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಹೇಳಿದರು.
ಯಾದಗಿರಿ ನಗರ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಜನರು ದಿನವೂ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ನೀರನ್ನು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿ, ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಆತಂಕವೂ ಇದೆ. ಈ ನಡುವೆ ತಹಸೀಲ್ದಾರರು, ತಾಪಂ ಇಒಗಳು ಹಾಗೂ ಗ್ರಾಪಂ ಪಿಡಿಒಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದರು.
ಯಾದಗಿರಿ ವಿಧಾನಸಭಾ ಕ್ಷೇತ್ರವು ಮೂರು ತಾಲೂಕುಗಳಲ್ಲಿ ವ್ಯಾಪಿಸಿದ್ದು, ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ನಗರದಲ್ಲಿಯೂ ಬಹುತೇಕ ವಾರ್ಡ್ಗಳಲ್ಲಿ ನೀರಿನ ಅಭಾವ ಕಂಡುಬರುತ್ತಿದೆ. ಜನರು ದೂರದೂರಿಗೆ ತೆರಳಿ ನೀರು ತರುವ ದೃಶ್ಯ ಸಾಮಾನ್ಯವಾಗಿದೆ. ಆದರೂ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಸುಮಾರು ೪೦ ದಿನಗಳ ಕಾಲ ಬೇಸಿಗೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ತಾಪಮಾನವು ೪೨ರಿಂದ ೪೫ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ತಕ್ಷಣವೇ ಶುದ್ಧ ಕುಡಿಯುವ ನೀರಿನ ಸರಬರಾಜು, ಜಾನುವಾರುಗಳಿಗೆ ನೀರು ಹಾಗೂ ಮೇವು ವ್ಯವಸ್ಥೆ ಕಲ್ಪಿಸಬೇಕು ಎಂದು ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದರು.





















