Home ಜಿಲ್ಲೆ ಬೆಂಗಳೂರು ಕರ್ನಾಟಕ ಮಹಾ ಜನ ಸೇನೆಯ ಸತತ ಹೋರಾಟಕ್ಕೆ ಸಂದ ಜಯ

ಕರ್ನಾಟಕ ಮಹಾ ಜನ ಸೇನೆಯ ಸತತ ಹೋರಾಟಕ್ಕೆ ಸಂದ ಜಯ

ಹೊಸಕೋಟೆ, ಏ.೩೦: ಕಳೆದ ಒಂದು ವರ್ಷದಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ನಡೆಯುತ್ತಿದ್ದ ಕರ್ನಾಟಕ ಮಹಾ ಜನ ಸೇನೆಯ ನಿರಂತರ ಹೋರಾಟಕ್ಕೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಎಂ.ವಿ.ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು


ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ನಲ್ಲೂರಹಳ್ಳಿ ಗ್ರಾಮದ ಸರ್ವೇ ನಂಬರ್ ೧೦ ರಲ್ಲಿ ಸರ್ಕಾರಿ ಗೋಮಾಳ ಹಾಗೂ ರಾಜಕಾಲುವೆಯ ೫ ಎಕರೆ ಜಮೀನು ಒತ್ತುವರಿ ಮಾಡಿ ಖಾಸಗಿ ಬಿಲ್ಡರ್ ಗಳು ಲೇಔಟ್ ನಿರ್ಮಾಣ ಮಾಡಿರುವುದನ್ನು ಖಂಡಿಸಿ ನಿರಂತರ ಹೋರಾಟ ನಡೆಸುವ ಮೂಲಕ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ತಾಲೂಕು ಆಡಳಿತ ಸರ್ವೇ ಇಲಾಖೆ ಇಂದು ಯಶಸ್ವಿಯಾಗಿ ತೆರವುಗೊಳಿಸಿದೆ.


ಹೋರಾಟದ ಹಿನ್ನೆಲೆ:
ದೊಡ್ಡನಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಸರ್ವೇ ನಂಬರ್ ೧೦ ರಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸುಮಾರು ೫ ಎಕರೆ ಜಮೀನನ್ನು ಖಾಸಗಿ ಬಿಲ್ಡರ್ ಗಳು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ವಶ ಪಡೆದುಕೊಂಡಿದ್ದರು. ಇದನ್ನು ಪ್ರತಿಭಟಿಸಿ ‘ಮಹಾ ಜನ ಸೇನೆ’ ಸಂಘಟನೆಯು ತಹಶೀಲ್ದಾರ್ ಕಚೇರಿ ಮುಂದೆ ನಿರಂತರ ಧರಣಿ ನಡೆಸಿತ್ತು. ಅಕ್ರಮ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸಂಘಟನೆಯು ಬಲವಾದ ಒತ್ತಾಯ ಹೇರಿತ್ತು.


ಕಾರ್ಯಾಚರಣೆ ವಿವರ:ಸಂಘಟನೆಯ ಹೋರಾಟಕ್ಕೆ ಮಣಿದ ಸರ್ಕಾರ ಮತ್ತು ಕಂದಾಯ ಇಲಾಖೆ, ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎಂ.ವಿ.ಮಂಜುನಾಥ್ ಇದು ಕೇವಲ ನಮ್ಮ ಸಂಘಟನೆಯ ಜಯವಲ್ಲ, ಬದಲಾಗಿ ಜನಸಾಮಾನ್ಯರ ಮತ್ತು ಸತ್ಯದ ಜಯ. ಸರ್ಕಾರಿ ಆಸ್ತಿ ಜನರಿಗಾಗಿ ಬಳಕೆಯಾಗಬೇಕು ಎಂದು ಹ? ವ್ಯಕ್ತಪಡಿಸಿದರು.


ಒತ್ತುವರಿ ತೆರವುಗೊಳಿಸಿದ ಬೆನ್ನಲ್ಲೇ ಸ್ಥಳೀಯ ಸಾರ್ವಜನಿಕರು ಮಹಾ ಜನ ಸೇನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ವಶಪಡಿಸಿಕೊಂಡ ಈ ಜಮೀನಿನಲ್ಲಿ ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆ ಮೂಲಕ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸಂಘಟನೆಯು ಸರ್ಕಾರಕ್ಕೆ ಮನವಿ ಮಾಡಿದರು .


ಈ ಗೆಲುವಿನ ಮೂಲಕ ಮಹಾ ಜನ ಸೇನೆಯು ಜನಸಾಮಾನ್ಯರ ಪರವಾಗಿ ನಿಲ್ಲುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಗ್ರಾಮಸ್ಥ ಬಸವರಾಜು ತಿಳಿಸಿದರು
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸಾವಿತ್ರಮ್ಮ, ಜನಸೇನೆ ಬಸವರಾಜು , ಕೆಂಪರಾಜು, ಪ್ರಕಾಶ್, ಸುರೇಶ್ , ಅಂಜಿ , ಅರುಣ್ ಹಾಗೂ ಗ್ರಾಮಸ್ಥರು ಹಾಜರಿದ್ದರು