
ಶಿಡ್ಲಘಟ್ಟ.ಏ,೩೦-ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಶೋಷಣೆಯ ವಿರುದ್ಧ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನರು ಅವರ ಜಯಂತಿಯನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ಸಮುದಾಯದವರು ಒಂದಾಗಿ ಆಚರಿಸುತ್ತಿರುವುದು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮಹತ್ವದ ಹೆಜ್ಜೆಯಾಗಿದೆ ಎಂದು ಚಿಂತಕರು ಹಾಗೂ ಹೋರಾಟಗಾರರಾದ ಡಾ. ಕೆ ಮೂರ್ತಿ ಸಾಮ್ರಾಟ್ ತಿಳಿಸಿದರು.
ತಾಲೂಕಿನ ಗೊರಮಡಗು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಹಾಗೂ ಡಾ. ಬಾಬು ಜಗಜೀವನ್ ರಾಮ್ ೧೧೯ನೇ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ “ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಡಾ.ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಎರಡು ಕಣ್ಣುಗಳಿದ್ದಂತೆ.ಇಂತಹ ಮಹಾನ್ ನಾಯಕರಿಂದ ಇಂದು ದಲಿತರು, ಹಿಂದುಳಿದ ವರ್ಗಗಳು ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕವಿ ಜನ ನಾಗಪ್ಪ ಮಾತನಾಡಿ ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ನೋವುಗಳನ್ನು ಅನುಭವಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಾಧನೆ ದೊಡ್ಡದು ಎಂದು ಬಣ್ಣಿಸಿದರು. ಇಂದು ನಾವು ಅನುಭವಿಸುತ್ತಿರುವ ಸಮಾನತೆ ಮತ್ತು ನೆಮ್ಮದಿಯ ಬದುಕಿಗೆ ಅವರು ಹಾಕಿಕೊಟ್ಟ ಸಂವಿಧಾನದ ಬುನಾದಿಯೇ ಮುಖ್ಯ ಕಾರಣ ಎಂದು ನೆನಪಿಸಿದ ಅವರು, ಈ ಮೌಲ್ಯಗಳನ್ನು ಯುವ ಪೀಳಿಗೆಗೆ ನಿರಂತರವಾಗಿ ತಿಳಿಸಿಕೊಡುವ ಕೆಲಸ ಆಗಬೇಕು ಎಂದರು.
ಗ್ರಾಮದ ಬೀದಿಗಳು ನೀಲಿ ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿದ್ದವು, ಕಲಾತಂಡಗಳೊಂದಿಗೆ ತಮಟೆ ವಾದ್ಯಗಳು, ಕೀಲು ಕುದುರೆ ಹಾಗೂ ಗಾರಡಿ ಗೊಂಬೆಗಳ ಮೆರವಣಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಲ್ಲದೆ ಕಾರ್ಯಕ್ರಮಕ್ಕೆ ಮೆರಗು ನೀಡಿದವು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಹಾಗೂ ಪಿಡಿಒ ಪವಿತ್ರ ಅವರು ಅಂಬೇಡ್ಕರ್ ಭಾವಚಿತ್ರದ ನಾಮಫಲಕದ ಮುಂದೆ ಕೇಕ್ ಕತ್ತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ನಂತರ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಗೂ ಗ್ರಾಮದಲ್ಲಿ ಸರ್ಕಾರಿ ಉದ್ಯೋಗ ಪಡೆದ ಯುವಕರಿಗೆ ವೇದಿಕೆಯಲ್ಲಿ ಗೌರವ ಸನ್ಮಾನ ಮಾಡಲಾಯಿತು.
ದೇವರ ಮಳ್ಳೂರು ಮಹೇಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚಾರ್ವಿ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಡಿಎಸ್‌ಎಸ್ ನಾರಾಯಣಸ್ವಾಮಿ, ಕೆ. ರಾಮಾಂಜಿನಪ್ಪ, ಶಿಕ್ಷಕ ಶ್ರೀನಿವಾಸ್, ಗೋಪಾಲಗೌಡ, ವಕೀಲ ಭಾಸ್ಕರ್, ಮೈತ್ರಿ ಲೋಕೇಶ್, ವಕೀಲ ನಾಗರಾಜ್, ಡೀಶ್ ಮಂಜುನಾಥ್,ಮಾಜಿ ಸದಸ್ಯರಾದ ವೆಂಟರೋಣಪ್ಪ, ಶ್ರೀನಿವಾಸ್, ಮುನಿ ನಾರಾಯಣಸ್ವಾಮಿ, ನರಸಿಂಹಪ್ಪ, ಗೆಂಗೆನಹಳ್ಳಿ ನಾರಾಯಣಸ್ವಾಮಿ, ಮುನಿಕೃಷ್ಣ, ನಾಗರಾಜಪ್ಪ, ನಾರಾಯಣಸ್ವಾಮಿ, ಕೇಶವರೆಡ್ಡಿ ,ವೆಂಕಟೇಶ್,ರಾಜೇಶ್, ಪಿಳ್ಳ ಮಂಜುನಾಥ್ ಹಾಜರಿದ್ದರು.

























