Home ಜಿಲ್ಲೆ ಬೆಂಗಳೂರು ಮಹಿಳಾ ಮೀಸಲಾತಿ ಪ್ರತ್ಯೇಕವಾಗಿ ಜಾರಿಗೊಳಿಸಿ

ಮಹಿಳಾ ಮೀಸಲಾತಿ ಪ್ರತ್ಯೇಕವಾಗಿ ಜಾರಿಗೊಳಿಸಿ

ರಾಮನಗರ,ಏ೩೦: ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ವಿರೋಧ ಮಾಡಿಲ್ಲ, ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಬದಲಾಗಿ ಇದರೊಂದಿಗೆ ಕ್ಷೇತ್ರ ವಿಸ್ತರಣೆ ಹಾಗೂ ಕ್ಷೇತ್ರವಿಂಗಡಣೆಯನ್ನು ಸೇರಿಸಿ ಜಾರಿಗೊಳಿಸಲು ಬಿಜೆಪಿ ಹೊರಟಿತ್ತು. ಕ್ಷೇತ್ರ ಮರುವಿಂಗಡನೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ, ಯಾರೂ ವಿರೋಧಿಸುತ್ತಿರಲಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ನಾಯ್ಡು ಹೇಳಿದರು.


ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ೨೦೨೩ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಸಂವಿಧಾನದ ೭೩, ೭೪ ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ತಂದಿದ್ದರು ಎಂದರು.


ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ೩೩% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ, ಈಗ ಮಾತ್ರ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ನಮ್ಮನ್ನು ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಬಿಂಬಿಸಿ,ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.


ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಕಾರ್ಯದರ್ಶಿ ಪುಷ್ಪ ಮಂಜುನಾಥ ರೆಡ್ಡಿ ಮಾತನಾಡಿ, ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ ೫೦% ಮಾಡಿದರೆ ಉತ್ತರ ಪ್ರದೇಶದಲ್ಲಿ ೮೦ ಸ್ಥಾನಗಳಿವೆ. ಅಲ್ಲಿಗೆ ೧೨೦ ಸ್ಥಾನಗಳಾಗುತ್ತವೆ. ಕರ್ನಾಟಕದಲ್ಲಿ ೪೨ ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದರು.


ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ. ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. ೫೦% ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು. ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ. ೨೦೨೩ರಲ್ಲೇ ೪೫೦ ಮತಗಳನ್ನು ಪಡೆದು ಅಂಗೀಕಾರವಾಗಿರುವ ಮಸೂದೆಯನ್ನು ನರೇಂದ್ರ ಮೋದಿಯವರು ಏಕೆ ಜಾರಿಮಾಡಲಿಲ್ಲ ಎಂದು ಪ್ರಶ್ನಿಸಿದರು.


ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಗಂಗಾಧರ್, ಮಾಜಿ ಶಾಸಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಕಿಲಾ ರಾಣಿ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಅರ್ಪಿತ ಹರೀಶ್, ತಾಲ್ಲೂಕು ಗ್ಯಾರಂಟಿ ಕಮಿಟಿ ಸದಸ್ಯರಾದ ವಾಣಿ ನಾಗರಾಜು, ಪುಷ್ಪ, ಕೆಡಿಪಿ ಸದಸ್ಯೆ ಅನಿತಾ, ಜಿಲ್ಲಾ ಗ್ಯಾರಂಟಿ ಕಮಿಟಿ ಸದಸ್ಯೆ ಶೋಭಾ, ಚನ್ನಪಟ್ಟಣ ನಗರಸಭೆ ಮಾಜಿ ಅಧ್ಯಕ್ಷೆ ಅಖಿಲ ಬಾನು, ರಾಮನಗರ ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಗಮ್ಮ, ಮಹಿಳಾ ಮುಖಂಡರಾದ ಸುಮಿತ್ರಾ, ಪದ್ಮಾವತಿ ಮತ್ತಿತರರು ಇದ್ದರು.