
ಧಾರವಾಡ,ಮಾ30 : ಜೀವಾತ್ಮ ಪರಮಾತ್ಮನಾಗಲು ಅನನ್ಯವಾದ ಉತ್ಕೃಷ್ಟ ಅಲೌಕಿಕ ಗಾಢ ಚಿಂತನೆಯನ್ನು ಬೋಧಿಸುವ `ವೀರಶೈವ ಪಂಚಸೂತ್ರೀಯ ಪ್ರವಚನ’ ಒಂದು ಮೇರು ದಾರ್ಶನಿಕ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ಅವರು ನಗರದ ಚರಂತಿಮಠ ಗಾರ್ಡನ್‍ದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ `ವೀರಶೈವ ಪಂಚಸೂತ್ರೀಯ ಪ್ರವಚನ’ ಕೃತಿಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ವೀರಶೈವವು ಯಾವುದೋ ಒಂದು ಜಾತಿ, ವರ್ಗ, ಪಂಗಡವನ್ನು ಸೂಚಿಸದೇ ಅದು ಶಿವ-ಜೀವರ ಆಧ್ಯಾತ್ಮದ ಅನುಸಂಧಾನ ಮಾರ್ಗವಾಗಿದೆ. ಈ ಪಥದಲ್ಲಿ ಮುನ್ನಡೆಯಲು ಯಾವುದೇ ವ್ಯಕ್ತಿಯು ಶ್ರೀಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಸಂಪಾದಿಸಿ ಭಕ್ತಿಯ ಬದ್ಧತೆಯಲ್ಲಿ ಹೆಜ್ಜೆಹಾಕಲು ಸದಾಶಿವನ ಪ್ರಥಮ ಸೃಷ್ಟಿಯಲ್ಲಿ ಅವತರಿಸಿದ ಶ್ರೀಜಗದ್ಗುರು ಪಂಚಾಚಾರ್ಯರು 5 ಜನ ಮಹರ್ಷಿಗಳಿಗೆ ಬೋಧಿಸಿದ ವಿಶಿಷ್ಟ ತತ್ವ ಪ್ರತಿಪಾದನೆಯೇ ವೀರಶೈವ ಪಂಚಸೂತ್ರಗಳು ಎಂದರು.
ಅಕ್ಕಿಆಲೂರು ಮುತ್ತಿನಕಂತಿಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಮಾಜಿ ಶಾಸಕ ಅಮೃತ ದೇಸಾಯಿ ಉದ್ಘಾಟಿಸಿದರು.






















