Home ಜಿಲ್ಲೆ ವಡಗಾಂವ (ದೇ) : ರಣಗಂಬ ಜಾತ್ರಾ ಮಹೋತ್ಸವ

ವಡಗಾಂವ (ದೇ) : ರಣಗಂಬ ಜಾತ್ರಾ ಮಹೋತ್ಸವ

ಔರಾದ :ಮಾ.5: ತಾಲೂಕಿನ ವಡಗಾಂವ (ದೇ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬದ ನಿಮಿತ್ತ ನಡೆಯುವ ರಣಗಂಬ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ವಡಗಾಂವ(ದೇ) ಗ್ರಾಮದ ದೇಶಮುಖ ಮನೆತನದವರು ತಲೆತಲಾಂತರದಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ. ಸುಮಾರು 75 ಅಡಿ ಉದ್ದ ಇರುವ ಈ ರಣಗಂಬ 12 ರಿಂದ 15 ಟನ್‍ನಷ್ಟು ತೂಗುತ್ತದೆ. ಯಾವುದೇ ಯಂತ್ರ, ತಂತ್ರದ ಸಹಾಯವಿಲ್ಲದೆ ಕೇವಲ ಮಾನವನ ಕೈಬಲದಿಂದ, ಛಂಗಬಲದಿಂದ ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲೆತ್ತಿ ರಣಗಂಬವನ್ನು ಪ್ರತಿಷ್ಠಾಪಿಸುವುದು ಈ ಊರಿನ ಸಾಂಪ್ರದಾಯಿಕ ಆಚರಣೆ ಆಗಿದೆ.

ಈ ಮಹೋತ್ಸವದಲ್ಲಿ ಇಲ್ಲಿಯವರೆಗೂ ಸಣ್ಣ ಪುಟ್ಟ ಗಾಯಗಳ ಹೊರತುಪಡಿಸಿದರೆ ಯಾವುದೇ ಒಂದೇ ಒಂದು ಸಾವು- ನೋವಿನಂಥ ಅಹಿತಕರ ಘಟನೆ ನಡೆಯದಿರುವುದು ದೈವಿಕ ಶಕ್ತಿಯ ಪ್ರತಿರೂಪದಂತೆ ಕಾಣುತ್ತದೆ. ಬೆಳಗ್ಗೆ ರಣಗಂಭ ಏರಿಸುವ ಪ್ರಯತ್ನ ಆರಂಭವಾದರೆ ಮದ್ಯಾಹ್ನದ ವರೆಗೂ ಈ ಕೆಲಸ ನಡೆಯುತ್ತದೆ. ಸಂಜೆ ಕೋಲಾಟ, ನೃತ್ಯ, ಆಂಧ್ಯಾ ಮೆರವಣಿಗೆ ಭಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದ ಬಳಿಕ ರಣಗಂಬ ನೆಲಕ್ಕೆ ಬಿಳಿಸಲಾಗುತ್ತದೆ.

ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ಶರಬಸಪ್ಪ ದೇಶಮುಖ, ಶಿವರಾಜ ಬುಣುಗೆ, ಸಿದ್ದಯ್ಯ ಸ್ವಾಮಿ, ಮಲಪ್ಪ ನೇಳಗೆ, ಶಂಕರೆಪ್ಪ ಧರ್ಮಜೆ, ಜಗನಾಥ ಪಟ್ನೆ, ಶರಣಪ್ಪ ಖಳೂರೆ, ಮಾಜಿ ಗ್ರಾಪಂ ಅಧ್ಯಕ್ಷ ರಾಜಕುಮಾರ ಹೇಡೆ, ಶಂಕರಯ್ಯ ಸ್ವಾಮಿ, ಪ್ರಕಾಶ ದೇಶಮುಖ, ಸಂಗಮೇಶ ಕಲ್ಲಾ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.


ರಣಗಂಬ ಉತ್ಸವದ ಐತಿಹಾಸಿಕ ಹಿನ್ನಲೆ:

ರಣಗಂಬ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದೇಶಮುಖರೆಂಬ ಪಾಳೆಗಾರರು ವಡಗಾಂವನ್ನು ಆಳ್ವಿಕೆ ನಡೆಸುತ್ತಿದ್ದರು. ಶತ್ರುಗಳನ್ನು ಸೋಲಿಸಿದ ಸವಿನೆನಪಿಗಾಗಿ ಬೃಹತ್ ಗಾತ್ರದ ರಣಗಂಬವನ್ನು ಎತ್ತಿ ನಿಲ್ಲಿಸುವು ಮೂಲಕ ಗ್ರಾಮಸ್ಥರು ತಮ್ಮ ಶೌರ್ಯವನ್ನು ಪ್ರದರ್ಶಿಸುತ್ತಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದ್ದು, ರಣಗಂಬವನ್ನು ಎತ್ತಿ ನಿಲ್ಲಿಸದಿದ್ದರೆ ಇಡೀ ಊರೇ ಶಾಪಗ್ರಸ್ತವಾಗಲಿದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.


ಪ್ರತಿವರ್ಷ ನಮ್ಮ ಗ್ರಾಮದಲ್ಲಿ ನಡೆಯುವ ಸಾಂಪ್ರದಾಯಿಕ ಹಬ್ಬ ರಣಗಂಬವನ್ನು ಗ್ರಾಮಸ್ಥರು ಹೆಣ್ಣು ದೇವತೆಯ ಪ್ರತಿರೂಪವೆಂದು ಬಿಂಬಿಸಿ ಊರಿನ ಜನರು ಭಕ್ತಿಭಾವದಿಂದ ಸೀರೆ, ಬಳೆ, ಗೋಧಿ, ಉಡಿಯಕ್ಕಿ ತುಂಬಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಯಾವುದೇ ಜಾತಿ ಮತ ಭೇಧ ವಿಲ್ಲದೆ ಎಲ್ಲರೂ ಈ ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷ.

ಬಸವರಾಜ ದೇಶಮುಖ.
ವಡಗಾಂವ(ದೇ) ಗ್ರಾಮದ ಮುಖಂಡರು.