Home ಮುಖಪುಟ ಸುದ್ದಿ ಅಮೆರಿಕ-ಇರಾನ್ ೧೪ ಅಂಶಗಳ ಒಪ್ಪಂದಕ್ಕೆ ಅಂಕಿತ

ಅಮೆರಿಕ-ಇರಾನ್ ೧೪ ಅಂಶಗಳ ಒಪ್ಪಂದಕ್ಕೆ ಅಂಕಿತ

ಸೇನಾ ಕಾರ್‍ಯಾಚರಣೆ ಅಂತ್ಯ

ವಾಷಿಂಗ್ಟನ್, ಜೂ. ೧೮- ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಲು ಜಾಗತಿಕ ವ್ಯಾಪಾರ ಮಹತ್ವದ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಸೇರಿದಂತೆ ೧೪ ಅಂಶಗಳ ಒಪ್ಪಂದಕ್ಕೆ ಅಂಕಿತ ಹಾಕಿವೆ. ಈ ಒಪ್ಪಂದದಿಂದಾಗಿ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ಅಂತ್ಯಗೊಂಡಿದೆ.
ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದು ಆರ್ಥಿಕ ನಿರ್ಬಂಧ ತೆರವು ಇರಾನ್ ಪರಮಾಣು ಯೋಜನೆ ಕುರಿತು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ೬೦ ದಿನಗಳ ಪ್ರಕ್ರಿಯೆ ಪ್ರಾರಂಭಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.


ಪ್ಯಾರಿಸ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಒಪ್ಪಂದ ಕರಡು ಪ್ರತಿಗೆ ಸಹಿ ಹಾಕಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಿ ಖಾಸಗಿ ಸುದ್ಧಿ ವರದಿ ಮಾಡಿದೆ.


ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯಾನ್ ಅವರು ಒಪ್ಪಂದಕ್ಕೆ ಸಹಿ ಮಾಡಿರುವುದರಿಂದ ಇದು ತಕ್ಷಣದಿಂದಲ್ಲೇ ಜಾರಿಗೆ ಬಂದಿದೆ.


ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದ ವ್ಯವಸ್ಥಿತ ಚೌಕಟ್ಟಿನೊಳಗೆ ನಡೆದಿದ್ದು, ತಕ್ಷಣದಿಂದಲೇ ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ, ಇರಾನ್‌ನ ಯುರೇನಿಯಂ ದಾಸ್ತಾನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಒಪ್ಪಂದದ ನಿಯಮಗಳಿಗೆ ಇರಾನ್ ಬದ್ಧವಾಗಿರುವುದನ್ನು ಆಧರಿಸಿ ಹಂತ ಹಂತವಾಗಿ ಆರ್ಥಿಕ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡಲಿದೆ ಎಂದು ಅಮೆರಿಕ ತಿಳಿಸಿದೆ.


ಶಾಂತಿ ಒಪ್ಪಂದ ಕರಡು ಅಂತಿಮಗೊಳಿಸಿ, ಎರಡು ರಾಷ್ಟ್ರಗಳ ನಾಯಕರು ಅಂಕಿತ ಹಾಕಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ದೃಢಪಡಿಸಿದ್ದಾರೆ. ಹೊರ್ಮುಜ್ ಜಲಸಂದಿಯನ್ನು ಸಂಚಾರ ಮುಕ್ತಗೊಳಿಸುವ ಬಗ್ಗೆಯೂ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.


ಹೊರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ಸಾರ್ವಭೌಮತ್ವ ಮತ್ತು ಅಧಿಕಾರ ಎತ್ತಿಹಿಡಿದು ಸುರಕ್ಷಿತ ಕಡಲ ಸಂಚಾರವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿರುವ ಇಸ್ಮಾಯಿಲ್ ಈ ೧೪ ಅಂಶಗಳ ಒಪ್ಪಂದವೂ ಲೆಬನಾನ್ ಸೇರಿದಂತೆ ಇತರೆಡೆ ಸೇನಾ ಕಾರ್ಯಾಚರಣೆಯನ್ನು ತಕ್ಷಣ ಮತ್ತು ಶಾಶ್ವತವಾಗಿ ನಿಲ್ಲಿಸಲು ಸೂಚಿಸುತ್ತದೆ. ಎರಡು ದೇಶಗಳ ಪರಸ್ಪರ ಒಪ್ಪಿಗೆಯೊಂದಿಗೆ ವಿಸ್ತರಿಸಬಹುದಾದ ೬೦ ದಿನಗಳೊಳಗೆ ಅಂತಿಮ ಒಪ್ಪಂದವನ್ನು ತಲುಪಲು ಇರಾನ್ ಮತ್ತು ಅಮೆರಿಕ ಪ್ರತಿಜ್ಞೆ ಮಾಡಿದೆ ಎಂದರು.


ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವುದು, ಮುಟ್ಟುಗೋಲು ಹಾಕಿಕೊಳ್ಳಲಾದ ಇರಾನ್ ಆಸ್ತಿ ಬಿಡುಗಡೆ, ಇರಾನ್ ತೈಲ ರಪ್ತುಗಳ ಮೇಲಿನ ಅಮೆರಿಕ ಹಣಕಾಸು ಇಲಾಖೆಯ ವಿನಾಯಿತಿಗಳು ಮತ್ತು ಇರಾನ್‌ಗಾಗಿ ಅಮೆರಿಕದ ಬೆಂಬಲದೊಂದಿಗೆ ಕನಿಷ್ಠ ೩೦೦ ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಪುನರ್ ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವು ಈ ಒಪ್ಪಂದದಲ್ಲಿ ಸೇರಿವೆ.