Home ಜಿಲ್ಲೆ ಯುಪಿಎಸ್ಸಿ ಸಿವಿಲ್ ಸರ್ವಿಸ್ ಫಲಿತಾಂಶ: ಗಿರಿ ಜಿಲ್ಲೆಗೆ ಕೀರ್ತಿಯ ಕಿರೀಟ – ನಾಲ್ವರು ಪ್ರತಿಭಾವಂತರ ಅದ್ಭುತ...

ಯುಪಿಎಸ್ಸಿ ಸಿವಿಲ್ ಸರ್ವಿಸ್ ಫಲಿತಾಂಶ: ಗಿರಿ ಜಿಲ್ಲೆಗೆ ಕೀರ್ತಿಯ ಕಿರೀಟ – ನಾಲ್ವರು ಪ್ರತಿಭಾವಂತರ ಅದ್ಭುತ ಸಾಧನೆ

ಯಾದಗಿರಿ:ಮಾ.7:ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾಗಿ ಪರಿಗಣಿಸಲ್ಪಡುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಯಾದಗಿರಿ ಜಿಲ್ಲೆಯ ನಾಲ್ವರು ಯುವ ಪ್ರತಿಭೆಗಳು ಅಖಿಲ ಭಾರತ ಮಟ್ಟದಲ್ಲಿ ಗಮನಾರ್ಹ ಯಾರ್ಂಕ್ ಗಳಿಸಿ ಗಿರಿ ಜಿಲ್ಲೆಗೆ ಅಪಾರ ಕೀರ್ತಿ ಮತ್ತು ಗೌರವವನ್ನು ತಂದಿದ್ದಾರೆ.

2025ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ಯಾದಗಿರಿಯ ಸಂದೀಪ್ ಬಾಡದ್ ಅಖಿಲ ಭಾರತ ಮಟ್ಟದಲ್ಲಿ 82ನೇ ಯಾರ್ಂಕ್ ಗಳಿಸಿ ರಾಜ್ಯ ಮಟ್ಟದಲ್ಲಿಯೂ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ ಸಾಧನೆಯಾಗಿದೆ. ಇದೇ ವೇಳೆ ಡಾ. ನಿವೇದಿತಾ ಭಾವಿಮನಿ 469ನೇ ಯಾರ್ಂಕ್, ಶಹಾಪುರದ ಬಸವರಾಜ್ ಜವಳಿ 664ನೇ ಯಾರ್ಂಕ್ ಹಾಗೂ ಚಂದ್ರಶೇಖರ್ 880ನೇ ಯಾರ್ಂಕ್ ಗಳಿಸುವ ಮೂಲಕ ಗಿರಿ ಜಿಲ್ಲೆಗೆ ಹೊಸ ಕೀರ್ತಿಯ ಅಧ್ಯಾಯವನ್ನು ಬರೆದಿದ್ದಾರೆ.

ಸಾಮಾನ್ಯವಾಗಿ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಗುರುತಿಸಲ್ಪಡುವ ಯಾದಗಿರಿ ಜಿಲ್ಲೆಯಿಂದ ಇಂತಹ ಮಹತ್ವದ ರಾಷ್ಟ್ರೀಯ ಮಟ್ಟದ ಸಾಧನೆ ಹೊರಹೊಮ್ಮಿರುವುದು ಜಿಲ್ಲೆಯ ಜನತೆಗೆ ಹೆಮ್ಮೆ ತಂದಿದ್ದು, ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ದೃಢ ಸಂಕಲ್ಪದ ಪ್ರತಿಫಲವೆಂದು ಪರಿಗಣಿಸಲಾಗುತ್ತಿದೆ.

ಸಂದೀಪ್ ಬಾಡದ್ – ರಾಜ್ಯದ ದ್ವಿತೀಯ ಸ್ಥಾನ, ರಾಷ್ಟ್ರಮಟ್ಟದಲ್ಲಿ 82ನೇ ಯಾರ್ಂಕ್
ಯಾದಗಿರಿ ನಗರದ ಕಿರಾಣಿ ವ್ಯಾಪಾರಿ ಬಸವರಾಜ್ ಬಾಡದ್ ಅವರ ಪುತ್ರ ಸಂದೀಪ್ ಬಾಡದ್ ಈ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 82ನೇ ಯಾರ್ಂಕ್ ಗಳಿಸಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಾದಗಿರಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಶಹಾಪುರದ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮುಂದುವರೆಸಿದರು. ಬಳಿಕ ಬೆಂಗಳೂರಿನ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕೆಲವು ವರ್ಷ ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ನಂತರ ಆಡಳಿತ ಸೇವೆಯಲ್ಲಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ದೆಹಲಿಯಲ್ಲಿ ತೀವ್ರ ತರಬೇತಿ ಪಡೆದು ಈ ಮಹತ್ವದ ಸಾಧನೆ ಮಾಡಿದ್ದಾರೆ.

ಡಾ. ನಿವೇದಿತಾ ಭಾವಿಮನಿ – ವೈದ್ಯಕೀಯ ಕ್ಷೇತ್ರದಿಂದ ಆಡಳಿತ ಸೇವೆಯತ್ತ ಹೆಜ್ಜೆ
ಯಾದಗಿರಿ ನಗರದ ನಿವೃತ್ತ ಆರೋಗ್ಯ ಸಿಬ್ಬಂದಿ ಚಂದಪ್ಪ ಭಾವಿಮನಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಭಾವಿಮನಿ ದಂಪತಿಯ ಪುತ್ರಿ ಡಾ. ನಿವೇದಿತಾ ಭಾವಿಮನಿ ಅಖಿಲ ಭಾರತ ಮಟ್ಟದಲ್ಲಿ 469ನೇ ಯಾರ್ಂಕ್ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಯಾದಗಿರಿಯಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಅವರು ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದು ವೈದ್ಯೆಯಾಗಿದ್ದರು. ಸಮಾಜದ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆಯ ಮೂಲಕ ಸೇವೆ ಸಲ್ಲಿಸಬೇಕು ಎಂಬ ದೃಢ ಸಂಕಲ್ಪದಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿ ಎರಡನೇ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ.

ಬಸವರಾಜ್ ಜವಳಿ – ಕನ್ನಡ ಮಾಧ್ಯಮದಿಂದ ರಾಷ್ಟ್ರಮಟ್ಟದ ಸಾಧನೆ
ಶಹಾಪುರ ಪಟ್ಟಣದ ಉದ್ಯಮಿಗಳಾದ ವಿಶ್ವನಾಥ್ ಹಾಗೂ ಗಿರಿಜಾ ಜವಳಿ ದಂಪತಿಯ ಪುತ್ರ ಬಸವರಾಜ್ ಜವಳಿ ಅಖಿಲ ಭಾರತ ಮಟ್ಟದಲ್ಲಿ 664ನೇ ಯಾರ್ಂಕ್ ಗಳಿಸಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲೇ ಪೂರ್ಣಗೊಳಿಸಿರುವುದು ವಿಶೇಷ. ಬಳಿಕ ಉನ್ನತ ಶಿಕ್ಷಣದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಕಠಿಣ ಪರಿಶ್ರಮದೊಂದಿಗೆ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಿ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯೊಬ್ಬರ ಈ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ.

ಚಂದ್ರಶೇಖರ್ – ನಿರಂತರ ಪರಿಶ್ರಮಕ್ಕೆ ಲಭಿಸಿದ ಯಶಸ್ಸು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚೆನ್ನೂರು ಗ್ರಾಮದ ಕೃಷಿಕ ಕುಟುಂಬದ ಪುತ್ರ ಚಂದ್ರಶೇಖರ್ ಅಖಿಲ ಭಾರತ ಮಟ್ಟದಲ್ಲಿ 880ನೇ ಯಾರ್ಂಕ್ ಗಳಿಸಿ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲೇ ಪೂರ್ಣಗೊಳಿಸಿ ನಂತರ ವನದುರ್ಗ ಹಾಗೂ ಕಲ್ಬುರ್ಗಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದ ಅವರು ಹಲವು ವರ್ಷಗಳ ಕಾಲ ನಾಗರಿಕ ಸೇವಾ ಪರೀಕ್ಷೆಗೆ ಶ್ರಮಪಟ್ಟು ಸಿದ್ಧತೆ ನಡೆಸಿದರು. ಮೂರು ಬಾರಿ ಸಂದರ್ಶನ ಹಂತ ತಲುಪಿದ ನಂತರ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವುದು ಅವರ ಧೈರ್ಯ ಮತ್ತು ದಿಟ್ಟ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.

ಯಾದಗಿರಿ ಜಿಲ್ಲೆಯ ಈ ನಾಲ್ವರು ಯುವಕರ ವಿಶಿಷ್ಟ ಸಾಧನೆಗೆ ಜಿಲ್ಲೆಯಾದ್ಯಂತ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಸಮಾಜಮುಖಿ ಸಂಘಟನೆಗಳು ಹಾಗೂ ಸಾರ್ವಜನಿಕರು ಅಭಿನಂದನೆಗಳ ಮಹಾಪೂರ ಹರಿಸುತ್ತಿದ್ದಾರೆ. ಗಿರಿ ಜಿಲ್ಲೆಯಿಂದ ಹೊರಹೊಮ್ಮಿದ ಈ ಸಾಧನೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯ ದೀಪವಾಗಿ ಬೆಳಗಲಿದೆ.