Home Lead News ಬಗೆಹರಿಯದ ಖಾತೆ ಬಿಕ್ಕಟ್ಟು

ಬಗೆಹರಿಯದ ಖಾತೆ ಬಿಕ್ಕಟ್ಟು

ಬೆಂಗಳೂರು, ಜೂ. ೬- ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾರೆಡ್ಡಿಯವರ ಮನವೊಲಿಸಿ ಅವರ ಮುನಿಸನ್ನು ತಣಿಸುವ ಪ್ರಯತ್ನಗಳು ನಡೆದಿದ್ದು, ಖಾತೆ ಹಂಚಿಕೆ ಬಿಕ್ಕಟ್ಟು ಇನ್ನು ಸುಖಾಂತ್ಯ ಕಂಡಿಲ್ಲ.


ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿಯವರ ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದು, ಸಚಿವ ರಾಮಲಿಂಗಾರೆಡ್ಡಿಯವರು ಮಾತ್ರ ತಮ್ಮ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಿದ್ದಾರೆ.
ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ನಿನ್ನೆ ತಡರಾತ್ರಿಯವರೆಗೂ ರಾಮಲಿಂಗಾರೆಡ್ಡಿಯವರ ಜತೆ ಚರ್ಚೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ ಬೆನ್ನಲ್ಲೆ ಇಂದು ಬೆಳಿಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಮಲಿಂಗಾರೆಡ್ಡಿಯವರ ಜತೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.


ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡುವ ಸಂಬಂಧ ಹೈಕಮಾಂಡ್ ಬಳಿ ಮಾತನಾಡುತ್ತೇವೆ. ಒಂದು ವೇಳೆ ಹೈಕಮಾಂಡ್ ಒಪ್ಪದಿದ್ದರೆ ಬೇರೆ ಖಾತೆಯನ್ನು ನೀಡುತ್ತೇವೆ. ಅದಕ್ಕೆ ಒಪ್ಪಿಕೊಳ್ಳಿ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿಯವರಿಗೆ ಮನವಿ ಮಾಡಿದ್ದಾರೆ. ಹಾಗಾಗಿ ಖಾತೆ ಹಂಚಿಕೆ ಬಿಕ್ಕಟ್ಟು ಪರಿಹಾರ ಈಗ ಹೈಕಮಾಂಡ್ ತೀರ್ಮಾನದ ಮೇಲೆ ನಿಂತಿದೆ.


ಬೆಂಗಳೂರು ನಗರಾಭಿವೃದ್ಧಿ ಖಾತೆ ಬಿಟ್ಟು ಬೇರೆ ಖಾತೆ ನೀಡಿದರೆ ಅದಕ್ಕೆ ರಾಮಲಿಂಗಾರೆಡ್ಡಿಯವರು ಒಪ್ಪುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಹೈಕಮಾಂಡ್‌ನ್ನು ಯಾವ ರೀತಿ ಮನವೊಲಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.


ಇಂದು ಬೆಳಿಗ್ಗೆ ರಣದೀಪ್ ಸಿಂಗ್ ಸುರ್ಜೇವಾಲರವರ ಜತೆ ಚರ್ಚೆ ನಡೆಸಿದ ರಾಮಲಿಂಗಾರೆಡ್ಡಿಯವರು ನಾನು ವಿದ್ಯಾರ್ಥಿ ಕಾಂಗ್ರೆಸ್‌ನಲ್ಲಿದ್ದಾಗಿನಿಂದಲೂ ಬೆಂಗಳೂರಿನಲ್ಲಿ ರಾಜಕಾರಣ ಮಾಡಿದ್ದೇನೆ. ಬೆಂಗಳೂರನ್ನು ಚೆನ್ನಾಗಿ ಬಲ್ಲೆ. ನನಗೆ ಬೆಂಗಳೂರು ಅಭಿವೃದ್ಧಿ ಕೊಡಿ, ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಖಾತೆ ಹಂಚಿಕೆ ಹೈಕಮಾಂಡ್ ತೀರ್ಮಾನವಾಗಿದೆ. ಹಾಗಾಗಿ ಹೈಕಮಾಂಡ್ ಮಾತನ್ನು ಮೀರುವಂತಿಲ್ಲ. ನಾವು ಹೈಕಮಾಂಡ್ ಜತೆ ಮಾತನಾಡುತ್ತೇವೆ. ಒಂದು ವೇಳೆ ಹೈಕಮಾಂಡ್ ಒಪ್ಪದಿದ್ದರೆ ಜಲಸಂಪನ್ಮೂಲ ಖಾತೆ ಬಿಟ್ಟು ಬೇರೆ ಖಾತೆಯನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಹೆಚ್ಚುವರಿಯಾಗಿ ಬೇರೆ ಖಾತೆಯನ್ನು ಕೊಡುವ ಸಂಬಂಧ ಹೈಕಮಾಂಡ್ ಜತೆ ಚರ್ಚಿಸುವುದಾಗಿಯೂ ಸುರ್ಜೇವಾಲ ಹೇಳಿದ್ದಾರೆ ಎನ್ನಲಾಗಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ರಾಮಲಿಂಗಾರೆಡ್ಡಿಯವರ ಜತೆ ನಿನ್ನೆ ರಾತ್ರಿ ೨ ಗಂಟೆಯವರೆಗೂ ಸಭೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು.


ರಾಮಲಿಂಗಾರೆಡ್ಡಿಯವರ ಜತೆಗಿನ ಮುಖ್ಯಮಂತ್ರಿ ಮಾತುಕತೆ ಯಶಸ್ವಿಯಾಗಿದೆ. ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳಿವೆಯಾದರೂ ರಾಮಲಿಂಗಾರೆಡ್ಡಿಯವರು ಸದ್ಯಕ್ಕಂತೂ ರಾಜೀನಾಮೆ ವಾಪಸ್ ಪಡೆದಿಲ್ಲ. ಹಾಗಾಗಿ ಖಾತೆ ಬಿಕ್ಕಟ್ಟು ಹಾಗೆಯೇ ಮುಂದುವರೆದಿದೆ.
ಈ ಬಿಕ್ಕಟ್ಟು ಪರಿಹಾರಕ್ಕೆ ಹೈಕಮಾಂಡ್ ಯಾವ ರೀತಿ ಮದ್ದು ಅರೆಯುತ್ತದೆ, ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಸಮಸ್ಯೆ ಬಗೆಹರಿದಿದೆ-ಡಿಕೆಶಿ

“ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ರಾಮಲಿಂಗಾರೆಡ್ಡಿ ಅವರ ಜತೆ ಶುಕ್ರವಾರ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ ಬಳಿಕ ಖಾಸಗಿ ಹೊಟೇಲ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ರಾಮಲಿಂಗಾರೆಡ್ಡಿ ಅವರ ಮುನಿಸು ಶಮನವಾಗಿದೆಯೇ ಎಂದು ಕೇಳಿದಾಗ ಹೀಗೆ ಉತ್ತರಿಸಿದರು.

ಅದೇ ಖಾತೆಯಲ್ಲೇ ಮುಂದುವರೆಯುತ್ತಾರೆಯೇ ಎಂದು ಕೇಳಿದಾಗ, “ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ, ಬೇರೆ ಯಾವ ವಿಚಾರ ಮಾತನಾಡಿದ್ದೇವೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ?” ಎಂದು ಮರುಪ್ರಶ್ನಿಸಿದರು.

ಇಂತಹ ಬೆಳವಣಿಗೆಗಳ ಬಗ್ಗೆ ಕೇಳಿದಾಗ, “ಇದೆಲ್ಲಾ ಆಗುತ್ತಾ ಇರಬೇಕು. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ” ಎಂದು ಹೇಳಿದರು.

ರಾಮಲಿಂಗಾರೆಡ್ಡಿ ಅವರು ಖಾತೆ ಬದಲಾವಣೆಗೆ ಒಪ್ಪಿಕೊಂಡಿದ್ದಾರೆಯೇ ಎಂದು ಕೇಳಿದಾಗ, “ಅವರು ಪಕ್ಷ ಬಿಟ್ಟು ಹೋಗುತ್ತಾರೆಯೇ? ಹಾಗೆಂದು ಹೇಳಿದ್ದಾರೆಯೇ? ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಒಂದಷ್ಟು ತಪ್ಪು ಸಂವಹನ ಆಗಿದೆ. ಸರಿಪಡಿಸುತ್ತೇವೆ” ಎಂದರು.