Home ಜಿಲ್ಲೆ ನಿಸರ್ಗ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಬೇಕು: ನಾಗೇಂದ್ರ ಬಿ. ಮೇವುಂಡಿ

ನಿಸರ್ಗ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಬೇಕು: ನಾಗೇಂದ್ರ ಬಿ. ಮೇವುಂಡಿ

Oplus_131072

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಜೂ.06 ತಾಲೂಕಿನ ಗದ್ದಿಕೆರೆ  ಸರಕಾರಿ ಪ್ರೌಢಶಾಲೆಯಲ್ಲಿ   ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿಸರ್ಗ ಸಿರಿ ಇಕೊ ಕ್ಲಬ್ ಸಹಯೋಗದಲ್ಲಿ ಗುರುವಾರ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮ   ಹಮ್ಮಿಕೊಳ್ಳಲಾಗಿತ್ತು.

 ಶಾಲೆಯ ಮುಖ್ಯಗುರು ನಾಗೇಂದ್ರ ಬಿ. ಮೇವುಂಡಿ ಮಾತನಾಡಿ ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯಗಳು ಜಾಗತಿಕ ಮಟ್ಟದಲ್ಲಿ ಗಂಭೀರ ಸಮಸ್ಯೆಗಳಾಗಿ ಪರಿಣಮಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಸಸಿಯಾದರೂ ನೆಟ್ಟು ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ದೈನಂದಿನ ಜೀವನದ ಭಾಗವಾಗಬೇಕು ಎಂದು ಅವರು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಅಗತ್ಯವಿದ್ದ ಸಸಿಗಳನ್ನು ಗದ್ದಿಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಒದಗಿಸಲಾಯಿತು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಸ್ವಚ್ಛ ಪರಿಸರ ನಿರ್ಮಾಣದ ಕುರಿತು ಮಾಹಿತಿ ನೀಡಲಾಯಿತು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಸ್ವೀಕರಿಸಲಾಯಿತು.ಮಕ್ಕಳಿಗೆ ಸಸಿಗಳನ್ನು ಬೆಳೆಸಲು ದತ್ತು ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ರವಿಚಂದ್ರ ನಾಯ್ಕ, ಮಂಜುನಾಥ ಟಿ.ಎಸ್., ರಾಜೇಶ್ವರಿ ಪಿ., ಕೊಟ್ರೇಶ ಬಿ., ಗಾಯತ್ರಿ ಬಿ.ಆರ್., ರಾಜೇಶ್ವರಿ ಕೆ. ಹಾಗೂ ನೀಲಮ್ಮ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು