Home ಜಿಲ್ಲೆ ಜಮೀರ್ ಖಾನ್ ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ-ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

ಜಮೀರ್ ಖಾನ್ ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ-ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.06 ಮಾಜಿ ಸಚಿವ ಹಾಗೂ ಶಾಸಕ ಬಿ.ಜೆಡ್.ಜಮೀರ್ ಅಹಮದ್ ಖಾನ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ, ನಗರದಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಮೊಹಮದ್ ಇಮಾಮ್ ನಿಯಾಜಿ ನೇತೃತ್ವದಲ್ಲಿ  ಜಮೀರ್ ಅಹಮದ್ ಖಾನ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಸ್ತೆತಡೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ಹೆಚ್.ಎನ್.ಮೊಹಮದ್ ಇಮಾಮ್ ನಿಯಾಜಿ, ರಾಜ್ಯದ ಮುಸ್ಲಿಂ ಸಮುದಾಯದ ಮುಖಂಡರಾದ ಜಮೀರ್ ಅಹಮದ್ ಖಾನ್, ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದಾರೆ. ಪಕ್ಷ ಸಂಘಟನೆ, ಚುನಾವಣೆ ಸೇರಿದಂತೆ ತಮಗೆ ವಹಿಸಿದ ಪಕ್ಷದ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿ  ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ.  ಎಲ್ಲಾ ಸಮಾಜದ ಬಡವರಿಗೂ ಆರ್ಥಿಕ ನೆರವು ನೀಡುವ ಮೂಲಕ ಎಲ್ಲಾ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡುವ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡದೆ ಹೋದರೆ ಅದು ಕಾಂಗ್ರೇಸ್ ಪಕ್ಷಕ್ಕೆ ನಷ್ಟವನ್ನುಂಟು ಮಾಡಲಿದೆ. ಈ ದೃಷ್ಟಿಯಿಂದ ಎರಡನೇ ಕಂತಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೇಸ್ ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಫಿರೋಜ್ ಖಾನ್, ಎಂ.ಎಂ.ಗೌಸ್, ಕೊತ್ವಾಲ್ ಮೋಸಿನ್, ಡಾ.ದರ್ವೇಶ್, ಅನ್ವರ್ ಬಾಷ, ಆಯತ್ ರಸೂಲ್, ದಾದಾಪೀರ್, ಎನ್.ಎಸ್.ರಫೀಕ್, ಸೈಯದ್ ಬುಡೇನ್, ಜಾವೀದ್ ಹುಸೇನ್, ನಾಸೀರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.