
ಧಾರವಾಡ, ಅ.೧೫: ಕ್ಷಯರೋಗ ನಿರ್ಮೂಲನೆ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ, ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಕ್ಷಯರೊಗ ಮುಕ್ತ ಭಾರತ ನಿರ್ಮಾಣದ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಅವರು ತಿಳಿಸಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ ಹಾಗೂ ಸ್ವಾಮಿ ವಿವೇಕಾನಂದ ಯುಥ್ ಮೂವ್ಮೆಂಟ್ ಇವರ ಸಹಯೋಗದಲ್ಲಿ ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಸಕ್ರೀಯ ಕ್ಷಯರೋಗ ಪತ್ಯೆ ಹಚ್ಚುವ ಆಂದೋಲನದ ಜಿಲ್ಲಾಮಟ್ಟದ ಪಾಲುದಾರರ ತರಬೇತಿಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಕ್ಷಯರೊಗವು ಮೈಕೋ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಮುಖ್ಯವಾಗಿ ಶ್ವಾಸಕೋಶಗಳಿಗೆ ಬಾಧಿಸುವ ಈ ಕಾಯಿಲೆಯನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು. ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಮ್ಮು ಇರುವುದು, ಜ್ವರ, ರಾತ್ರಿ ಬೆವರುವುದು, ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು ಮತ್ತು ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕ್ಷಯರೊಗದ ಪ್ರಮುಖ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳಿರುವವರು ತಡಮಾಡದೇ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ತರಬೇತಿ ಪಡೆಯುತ್ತಿರುವ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಮ್ಮ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಕ್ಷಯರೊಗದ ಕುರಿತು ಜಾಗೃತಿ ಮೂಡಿಸಬೇಕು, ಕ್ಷಯರೊಗದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕವನ್ನು ನಿವಾರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕ್ಷಯರೋಗದಿಂದ ಬಳಲುತ್ತಿರುವವರನ್ನು ದೂರವಿಡದೇ ಅವರಿಗೆ ಮಾನಸಿಕ ಬೆಂಬಲ ನೀಡಿ, ಚಿಕಿತ್ಸೆಯನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸಬೇಕು ಎಂದರು.
ಸಾರ್ವಜನಿಕರು ಕೆಮ್ಮುವಾಗ, ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಉತ್ತಮ ಗಾಳಿಯಾಡುವ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಇರುವುದು, ಕೆಮ್ಮಿನ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಆದ್ದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕ್ಷಯರೋಗದ ಶಂಕಿತ ಪ್ರಕರಣಗಳನ್ನು ಗುರುತಿಸಿ ಆರೋಗ್ಯ ಇಲಾಖೆಯ ಮೂಲಕ ಸೂಕ್ತ ತಪಾಸಣೆಗೆ ಒಳಪಡಿಸಲು ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ರವೀಂದ್ರ ಬೊವೇರ ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಜಿಲ್ಲೆಯ ಕ್ಷಯರೋಗ ನಿರ್ಮೂಲನೆಗೆ ಸಕ್ರೀಯ ಕ್ಷಯರೋಗ ಪತ್ತೆಹಚ್ಚುವ ಆಂದೋಲನ ಕಾರ್ಯಕ್ರಮ ಬಹಳ ಮುಖ್ಯವಾಗಿದೆ. ಟಿ.ಬಿ.ರೋಗಿಗಳನ್ನು ಅವರು ಸ್ವತಃ ಆಸ್ಪತ್ರೆಗೆ ಬರುವವರೆಗೆ ಕಾಯದೆ ಸಮುದಾಯದಲ್ಲಿಯೇ ಸಕ್ರೀಯವಾಗಿ ಗುರುತಿಸಿ, ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಪಡಿಸುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾ ಎಲ್ಲರೂ ಕೈಜೋಡಿಸಿ ಂಅಈ-ಖಿಃ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಮತ್ತು ಕ್ಷಯರೋಗ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಸಹಕರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ಡಿ.ಪಿ.ಎಸ್ ಎಲ್.ಎಸ್. ಅಂಬಿಗೇರ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸಂಜಯ ಡುಮ್ಮಗೋಳ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ಎಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವೀರಣ್ಣಗೌ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎನ್ ಹುಡೇದಮನಿ, ಧಾರವಾಡ ಪೋಲಿಸ್ ಕಾರಾಗ್ರಹ ಅಧೀಕ್ಷಕ ವೆಂಕಟೇಶ ರಘುಪತಿ, ಹುಬ್ಬಳ್ಳಿಯ ಜೈಲ್ ಅಧೀಕ್ಷಕರಾದ ಶಬೂದ್ದೀನ್ ಕೆ., ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ರೂಪಾಲಿ ನಾಯಕ, ಈರಣ್ಣ ಪೋದಾರ, ಈರಣ್ಣ ತರ್ಲಗಟ್ಟ, ಸರಸ್ವತಿ ಹರಿಜನ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ತಿವಾರಿ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಲು ತಾಲೂಕಾ ಆಶಾ ಮೇಲ್ವಿಚಾರಕರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಉಪಸ್ಥಿತರಿದ್ದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್. ಎನ್ ಅಗಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.





















