Home ಜಿಲ್ಲೆ ಕಲಬುರಗಿ ಶರಣರ ಮಹತಿಯ ಒಟ್ಟು ಸಾರವೇ ಪ್ರಭುಲಿಂಗಲೀಲೆ

ಶರಣರ ಮಹತಿಯ ಒಟ್ಟು ಸಾರವೇ ಪ್ರಭುಲಿಂಗಲೀಲೆ

ಕಲಬುರಗಿ: ಬಸವಾದಿ ಶರಣರ ವಚನ ಸಿದ್ಧಾಂತ ಸರಳ ಸಿದ್ಧಾಂತ. ಅವರು ಜೀವನದ ಸತ್ಯತೆಯ ಸಂಸ್ಕøತಿ ಕಲಿಸಿದರು. ಅವರ ಸತ್ಯವಚನಗಳನ್ನು ಸುಮ್ಮನೆ ಕೇಳಿದರೇ ಮನಸ್ಸು ಪ್ರಸನ್ನವಾಗುತ್ತದೆ. ಓದುಗರು, ಕೇಳುಗರು ಧನ್ಯರಾಗುತ್ತೇವೆ.ಮನುಷ್ಯ ಮೊದಲು ಉತ್ತಮ ಓದುಗ ಮತ್ತು ಕೇಳುಗನಾಗಬೇಕು. ಒಳ್ಳೆಯ ಕೇಳುಗ ಒಳ್ಳೆಯ ಹೇಳುಗನಾಗುತ್ತಾನೆ. ಇದನ್ನೇ ನಮ್ಮಪೂರ್ವಜರು ಶ್ರವಣಂ, ಕೀರ್ತನಂ, ಸ್ಮರಣಂ, ಪಾದಸೇವೆಯಂ, ಅರ್ಚನಂ, ಸಖ್ಯಂ ಎಂಬ ಎಂದು ಹೇಳಿದ್ದಾರೆ. ಎನಗೆ ನಿಮ್ಮನೆನಹಾದಾಗಲೇ ಉದಯ, ಎನಗೆ ನಿಮ್ಮ ಮರೆಹಾದಾಗಲೇ ಅಸ್ತಮಾನಎಂದು ಬಸವಣ್ಣನವರು ಕರೆದಿದ್ದಾರೆ.ಅಷ್ಟಿಷ್ಟು ಬಲ್ಲವರು, ಭಾವುಕರು, ಬಲ್ಲಿದರು ಈ ಜಗತ್ತಿನಲ್ಲಿದ್ದಾರೆ.ಎಲ್ಲ ಬಲ್ಲವರು ಯಾರೂ ಇಲ್ಲ. ಇದನ್ನೇ ಸರ್ವಜ್ಞ ಕವಿ
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ,ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯವೆಲ್ಲರಿಗೆ ಇಲ್ಲ ಸರ್ವಜ್ಞ
ಎಲ್ಲ ವಿದ್ಯೆಗಳನ್ನು ಅರಿತವರಾರೂ ಇಲ್ಲ. ಇದ್ದರೂ ಅವರು ಬಹು ಅಲ್ಪ ಜನರು, ಅವರು ಸಹ ಬಲಹೀನರಾಗಿದ್ದಾರೆ;
ಸಾಹಿತ್ಯವನ್ನು ಎಲ್ಲರೂ ಬರೆಯಲಾರರು ಅಥವಾ ಓದಲಾರರು ಎಂದು ಹೇಳಿದ್ದಾರೆ.
ಅಹಂ ಅಳಿದ ಅಲ್ಲಮನ ಚರಿತ್ರೆಯನ್ನು
ಕೇಳುವವರು ಕೂಡ ಮಹಾದೇವ ಸ್ವರೂಪರು ಎಂಬ ಶಿವಭಾವದಲ್ಲಿ ಚಾಮರಸ ತನ್ನೊಳಗಿನ ಅಹಂ ಕಳೆದುಕೊಂಡು ಆತ್ಮನಿವೇದನೆಯ ಭಾವದೊಳಗೆ ಪ್ರಭುಲಿಂಗ ಲೀಲೆಯ ಮಹತಿಯನ್ನು ಈ ಕಾವ್ಯದಲ್ಲಿ ಹೇಳುತ್ತಾರೆ.
ಅಲ್ಲಮ ಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗವನು ನಾ ನೆಲ್ಲರಹನರಿವಂದದಲಿ ಪೇಳುವೆನುಚಿತ ವಚನದಲಿ?
ಸೊಲ್ಲಿನೊಳಗಣ ಸೊಂಪನಿಂಪನು ಬಲ್ಲವರುಭಾವುಕರು ಭಕ್ತಿಯ ಬಲ್ಲಿದರು|ಲಾಲಿಪುದಿ ಪ್ರಭುಲಿಂಗಲೀಲೆಯಲಿ
ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗ ಎಂದರೆ 12ನೇ ಶತಮಾನದ ಶರಣ ಸಂಸ್ಕೃತಿಯಲ್ಲಿನ ಭಕ್ತಿ, ವೈರಾಗ್ಯ ಮತ್ತುಜ್ಞಾನದ ಪರಿಪೂರ್ಣ ಮಾರ್ಗ. ಇದು ಕೇವಲ ಬಾಹ್ಯ ಆಚರಣೆಗಳಿಗೆ ಸೀಮಿತವಾಗದೆ, ಅಂತರಂಗದ ಶುದ್ಧೀಕರಣ, ನಿರ್ಮಾಯತ್ವಮತ್ತು ಅಹಂಕಾರದ ವಿಸರ್ಜನೆಯನ್ನು ಪ್ರತಿಪಾದಿಸುತ್ತದೆ.
ಇದು ಕೇವಲ ಮಾತಿನ ಬೂಟಾಟಿಕೆ ಅಲ್ಲ. ತಮ್ಮ ತನು,ಮನ, ಧನವನ್ನು ಗುರು,ಲಿಂಗ, ಜಂಗಮಕ್ಕೆ ಸವೆಸಿ ಪರಮ ಪದವಿಹೊಂದಿದ ಭಕ್ತರು ಕೇಳುವ ಪ್ರಭುಲಿಂಗಲೀಲೆ. ಶರಣರು ಇಂದಿಗೂ ಸ್ಮರಣೀಯರು. ಇಂತಹ ಶರಣರ ಒಟ್ಟು ಸಾರವೇ ಈಪ್ರಭುಲಿಂಗಲೀಲೆ ಎಂದು ಬಹಳ ಯೋಗ್ಯವಾದ ಮಾತುಗಳನ್ನು ಹೇಳುತ್ತಾರೆ.

  • ಪೂಜ್ಯ ಮಹಾಂತಸ್ವಾಮಿಗಳು, ಕಲ್ಯಾಣಾಶ್ರಮ,ಮುದಗಲ್