
ಚೆನ್ನೈ, ಮೇ೯:ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದು ದಿನಗಳು ಕಳೆದರೂ ಸರ್ಕಾರ ರಚನೆಯ ಕಸರತ್ತು ಮಾತ್ರ ಮುಗಿಯದ ಅಧ್ಯಾಯವಾಗಿದೆ. ನಟನಿಂದ ರಾಜಕಾರಣಿಯಾಗಿ ಬದಲಾಗಿರುವ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತದ ಮ್ಯಾಜಿಕ್ ನಂಬರ್ ’೧೧೮’ ತಲುಪಲು ಪಡಬಾರದ ಪಾಡುಪಡುತ್ತಿದೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಕಳೆದ ಮೂರು ದಿನಗಳಲ್ಲಿ ವಿಜಯ್ ಮೂರು ಬಾರಿ ಭೇಟಿ ಮಾಡಿದ್ದರೂ, ಸಂಖ್ಯಾಬಲದ ಸ್ಪಷ್ಟ ಪುರಾವೆ ಇಲ್ಲದ ಕಾರಣ ಸರ್ಕಾರ ರಚನೆಯ ಆಮಂತ್ರಣ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.ಲೆಕ್ಕಾಚಾರ ಉಲ್ಟಾ ಆಗಿದ್ದು ಎಲ್ಲಿಒಟ್ಟು ೨೩೪ ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ ೧೦೮ ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ, ವಿಜಯ್ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ.
ಹೀಗಾಗಿ ಪಕ್ಷದ ಬಲ ೧೦೭ಕ್ಕೆ ಕುಸಿದಿದೆ. ಅಧಿಕಾರ ಹಿಡಿಯಲು ಇನ್ನೂ ೧೧ ಶಾಸಕರ ಬೆಂಬಲ ವಿಜಯ್‌ಗೆ ಅನಿವಾರ್ಯವಾಗಿದೆ.ಸದ್ಯದ ಬೆಂಬಲದ ಸಮೀಕರಣ:ಕಾಂಗ್ರೆಸ್ (೫ ಶಾಸಕರು): ಡಿಎಂಕೆಗೆ ಕೈಕೊಟ್ಟು ವಿಜಯ್ ಬೆಂಬಲಕ್ಕೆ ನಿಂತಿದೆ. ಆದರೆ, “ಕೋಮುವಾದಿ ಶಕ್ತಿಗಳನ್ನು” (ಬಿಜೆಪಿ) ದೂರವಿಡಬೇಕು ಎಂಬ ಷರತ್ತು ವಿಧಿಸಿದೆ.
ಸಿಪಿಐ (೨ ಶಾಸಕರು) ಸ್ಥಿರ ಸರ್ಕಾರಕ್ಕಾಗಿ ಹೊರಗಿನಿಂದ ಬೆಂಬಲ ಘೋಷಿಸಿದೆ.ಸಿಪಿಐ(ಎಂ) (೨ ಶಾಸಕರು): ಯಾವುದೇ ಮಂತ್ರಿ ಸ್ಥಾನದ ಆಕಾಂಕ್ಷೆಯಿಲ್ಲದೆ ಬೆಂಬಲ ನೀಡಿದೆ.
ಗಣಿತ ಹೀಗಿದೆ:
೧೦೭ + ೫ + ೨ + ೨ = ೧೧೬. ಬಹುಮತಕ್ಕೆ ಇನ್ನೂ ೨ ಸ್ಥಾನಗಳ ಕೊರತೆ ವಿಜಯ್ ತಂಡವನ್ನು ಕಂಗಾಲಾಗಿಸಿದೆ. ವಿಸಿ ಕೆ ಮತ್ತು ಐಯುಎಂಎಲ್!ವಿಜಯ್‌ಗೆ ಆಸರೆಯಾಗುತ್ತಾರೆ ಎಂದು ಭಾವಿಸಲಾಗಿದ್ದ ವಿದುತಲೈ ಚಿರುತೈಗಳ್ ಕಚ್ಚಿ ಮತ್ತು ಐಯುಎಂಎಲ್ ಪಕ್ಷಗಳು ಅನಿಶ್ಚಿತತೆಯ ನಾಟಕವಾಡುತ್ತಿವೆ.ವಿಸಿ ಕೆ ಬೇಡಿಕೆ: ಎರಡು ಶಾಸಕರನ್ನು ಹೊಂದಿರುವ ವಿಸಿ ಕೆ ಪಕ್ಷವು, ಬೆಂಬಲ ನೀಡಲು ’ಉಪಮುಖ್ಯಮಂತ್ರಿ ಪಟ್ಟ ಮತ್ತು ಸಂಪುಟದಲ್ಲಿ ಸ್ಥಾನ ಬೇಕೆಂದು ಪಟ್ಟು ಹಿಡಿದಿದೆ. ಶುಕ್ರವಾರ ರಾತ್ರಿ ಬೆಂಬಲದ ಪತ್ರ ನೀಡಿದ್ದೇವೆ ಎಂದು ಟ್ವೀಟ್ ಮಾಡಿ, ಗಂಟೆಯೊಳಗೆ ಅದನ್ನು ಡಿಲೀಟ್ ಮಾಡಿರುವುದು ವಿಜಯ್ ಪಾಳೆಯದಲ್ಲಿ ಆತಂಕ ಮೂಡಿಸಿದೆ.ಐಯುಎಂಎಲ್ ಯು-ಟರ್ನ್: ಮೊದಲು ಬೆಂಬಲ ನೀಡುವ ಸುಳಿವು ನೀಡಿದ್ದ ಮುಸ್ಲಿಂ ಲೀಗ್, ನಂತರ “ನಾವು ಯಾರಿಗೂ ಬೆಂಬಲ ಪತ್ರ ನೀಡಿಲ್ಲ, ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುತ್ತೇವೆ” ಎಂದು ಸ್ಪಷ್ಟಪಡಿಸಿ ವಿಜಯ್‌ಗೆ ಶಾಕ್ ನೀಡಿದೆ.
ಎಎಮ್‌ಎಂಕೆ ಆಕ್ರೋಶಇದೇ ನಡುವೆ, ಟಿಟಿವಿ ದಿನಾಕರನ್ ನೇತೃತ್ವದ ಎಎಮ್‌ಎಂಕೆ ಪಕ್ಷದ ಬೆಂಬಲ ಪತ್ರವನ್ನು ಟಿವಿಕೆ ಕಾರ್ಯಕರ್ತರು ನಕಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನನ್ನ ಪಕ್ಷದ ಏಕೈಕ ಶಾಸಕ ಎಐಎಡಿಎಂಕೆ ಮೈತ್ರಿಕೂಟದೊಂದಿಗೆ ಇದ್ದಾರೆ. ಟಿವಿಕೆ ನಕಲಿ ದಾಖಲೆ ಸೃಷ್ಟಿಸಿ ಪ್ರಜಾಪ್ರಭುತ್ವದ ಅಣಕವಾಡುತ್ತಿದೆ” ಎಂದು ದಿನಾಕರನ್ ಕಿಡಿಕಾರಿದ್ದಾರೆ.
ರಾಜ್ಯಪಾಲರ ನಿಲುವು ಕಠಿಣಬೆಂಬಲ ನೀಡುವ ಪಕ್ಷಗಳ ಶಾಸಕರ ಸಹಿ ಇರುವ ಅಧಿಕೃತ ಪತ್ರಗಳನ್ನು ಸಲ್ಲಿಸುವವರೆಗೂ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವುದಿಲ್ಲ ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ. ಶನಿವಾರ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತಾದರೂ, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡು ರಾಜಕೀಯ ’ಹಂಗ್ ಸ್ಥಿತಿಯಲ್ಲೇ ಮುಂದುವರಿದಿದೆ.
ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ’ದಳಪತಿ’ ವಿಜಯ್‌ಗೆ, ವಿಧಾನಸಭೆಯ ಸಂಖ್ಯಾಬಲದ ಗಣಿತ ಮಾತ್ರ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.


























