
ಕಲಬುರಗಿ :ಜು.7: ಗ್ರಾಮೀಣ ಅಭಿವೃದ್ಧಿಯು ಕೇವಲ ಕೃಷಿಯ ಅಭಿವೃದ್ಧಿಯಲ್ಲ. ಇದು ಗ್ರಾಮೀಣ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಜೀವನದ ಸಮಗ್ರ ಸುಧಾರಣೆಯಾಗಿದೆ. ಬಡತನ ನಿರ್ಮೂಲನೆ, ವಿದ್ಯುತ್, ನೀರು, ರಸ್ತೆ ನಿರ್ಮಾಣಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ನಗರೀಕರಣಕ್ಕೆ ವಲಸೆ ಹೋಗುವುದನ್ನು ತಡೆಯಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ಜೇವರ್ಗಿ ತಾಲೂಕಿನ ಗುಡೂರ(ಎಸ್ ಎ) ಗ್ರಾಮದ ‘ಸಜ್ಜನ ಶ್ರೀ ಸಂಗಮೇಶ್ವರ ದೇವಾಲಯ’ದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ “ವಿಶ್ವ ಗ್ರಾಮೀಣಾಭಿವೃದ್ಧಿ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ಶ್ರೀ ವಿಶ್ವರಾಧ್ಯ ಶಿಕ್ಷಣ ಸಂಸ್ಥೆ’ಯ ಅಧ್ಯಕ್ಷ ದೇವೇಂದ್ರ ಬಿ.ತಳವಾರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಬಸವರಾಜ ಕುಸನೂರ, ಸಿದ್ದಪ್ಪ ದೊಡ್ಡಮನಿ, ಮಲ್ಲಣ್ಣ ಜೈನಾಪುರ, ದೀಪಲು ಪವಾರ್, ಶರಣು ಕೆರೂರ,ಅಂಬರೀಶ್ ತಳವಾರ, ಭಾಗ್ಯಶ್ರೀ, ಮೋನಿಕಾ ಸೇರಿದಂತೆ ಇನ್ನಿತರರಿದ್ದರು.



























