Home ಜಿಲ್ಲೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ೯ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ನಗದು ಬಹುಮಾನ – ಸಾಧಕ...

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ೯ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ನಗದು ಬಹುಮಾನ – ಸಾಧಕ ಪತ್ರಕರ್ತರಿಗೆ ಸನ್ಮಾನ

ಯಾದಗಿರಿ:ಮೇ.೧೯: ಪತ್ರಕರ್ತರ ಮಕ್ಕಳು ಶಿಕ್ಷಣ ಹಾಗೂ ಪ್ರತಿಭೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಪತ್ರಕರ್ತರು ತಮ್ಮ ವೃತ್ತಿ ಜವಾಬ್ದಾರಿಗಳ ಜೊತೆಗೆ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ರೂಪಿಕರಣದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ ಅವರು ಮೊಬೈಲ್ ಹಾಗೂ ದೂರದರ್ಶನಗಳ ಅತಿಯಾದ ಬಳಕೆಯಿಂದ ದೂರವಿದ್ದು, ಹೊರಾಂಗಣ ಕ್ರೀಡೆಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರು ತಮ್ಮ ಅಮೂಲ್ಯ ಸಮಯವನ್ನು ಸಮಾಜದ ಒಳಿತಿಗಾಗಿ ಮೀಸಲಿಡುತ್ತಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು. ಮೊಬೈಲ್ ಹಾಗೂ ಟಿವಿಗಳಿಂದ ದೂರವಿದ್ದು ಗುರಿಯತ್ತ ಏಕಾಗ್ರತೆಯಿಂದ ಮುನ್ನಡೆಯುವ ಮೂಲಕ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪತ್ರಕರ್ತರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಹೆಮ್ಮೆ ಹೆಚ್ಚಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪತ್ರಕರ್ತರ ಮಕ್ಕಳಿಗೆ ತಲಾ ?೫ ಸಾವಿರ ನಗದು ಬಹುಮಾನ ನೀಡಿ ಗೌರವಿಸುತ್ತಿರುವ ರಾಜ್ಯದ ಮೊದಲ ಸಂಘ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿದೆ ಎಂದು ತಿಳಿಸಿದರು. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಪತ್ರಕರ್ತರ ಮಕ್ಕಳಾದ ರಿಷಿಕಾ ರಾಘವೇಂದ್ರ ಸೈದಾಪುರ, ವರುಣ ಮಹೇಶ್ ಕಲಾಲ, ಮುತ್ತುರಾಜ್ ರವಿರಾಜ್ ಕಂದಳ್ಳಿ, ಭಾರ್ಗವ ಭೀಮಸೇನರಾವ ಕುಲಕರ್ಣಿ, ಇಕ್ರಾ ಶಹಜಿಯಾ ಖಾಜಾ ಕಲೀಮುದ್ದೀನ್ ಫರೀದಿ ಸುರಪುರ, ಸಾಯಿಸುಜಲ ಮಲ್ಲಿಕಾರ್ಜುನ ಮುದ್ನೂರ ಶಹಾಪುರ, ಸಂಗೀತಾ ಶಿವಣ್ಣ ಚಿನ್ನಾಕಾರ ಬೂದಿಹಾಳ, ಹರ್ಷಿತ್ ರಾಠಿ ಹಾಗೂ ಯಶೋಧಾ ಚಂದ್ರು ನಾರಾಯಣಪುರ ಅವರಿಗೆ ತಲಾ ?೫ ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಹೆಚ್ಚುವರಿಯಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ?೨ ಸಾವಿರ ಪ್ರೋತ್ಸಾಹಧನ ವಿತರಿಸಿದರು.
ಅದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಅಮರೇಶ ಹಿರೇಮಠ, ಟಿ. ನಾಗೇಂದ್ರ, ಮಲ್ಲಯ್ಯ ಪೋಲಂಪಲ್ಲಿ ಹಾಗೂ ಬಸವರಾಜ ಕಟ್ಟಿಮನಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಸಂಕೀನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ಧೋಕಾ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ರಾಜ್ಯ ಪರಿಷತ್ ಸದಸ್ಯ ಸಾಗರ್ ದೇಸಾಯಿ, ಸಂಘದ ಖಜಾಂಚಿ ರಾಜು ನಲ್ಲಿಕರ್ ಸೇರಿದಂತೆ ಅನೇಕ ಗಣ್ಯರು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.