
ಯಾದಗಿರಿ:ಮೇ.1: ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಭಾರತದ ಸರ್ವೋಚ್ಚ ನ್ಯಾಯಾಲಯ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್ ಅನ್ನು ಇದೇ ಮೊದಲ ಬಾರಿಗೆ ಆಯೋಜಿಸಿದೆ. ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಾಹಕ ಅಧ್ಯಕ್ಷೆ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಅನು ಸಿವರಾಮನ್ ತಿಳಿಸಿದ್ದಾರೆ.
ಬೆಂಗಳೂರುದಲ್ಲಿನ ಹೈಕೋರ್ಟ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವ ಒಟ್ಟು 4,328 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಕ್ಕೆ ಗುರುತಿಸಲಾಗಿದೆ ಎಂದರು. ಆಸಕ್ತರು ತಮ್ಮ ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಸಾರ್ವಜನಿಕರು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಪ್ರಕರಣಗಳನ್ನು ನೋಂದಾಯಿತ ಮಧ್ಯಸ್ಥರ ಮೂಲಕ ಸ್ಥಳೀಯ ಮಟ್ಟದಲ್ಲೇ ಸಂಧಾನದ ಮೂಲಕ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 15 ಪ್ರಕರಣಗಳನ್ನು ಗುರುತಿಸಲಾಗಿದೆ.
ಬ್ಯಾಂಕಿಂಗ್, ವಿಮಾ, ನಾಗರಿಕ, ಮೋಟಾರು ಅಪಘಾತ ಪರಿಹಾರ, ಗ್ರಾಹಕ ವ್ಯಾಜ್ಯಗಳು, ರೇರಾ, ಕ್ರಿಮಿನಲ್, ಕೌಟುಂಬಿಕ, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನು, ಭೂಸ್ವಾಧೀನ, ಆಸ್ತಿ ತೆರಿಗೆ, ಬಾಡಿಗೆ ನಿಯಂತ್ರಣ ಸೇರಿದಂತೆ ಹಲವು ವಿಭಾಗಗಳ ಪ್ರಕರಣಗಳನ್ನು ಈ ಲೋಕ ಅದಾಲತ್‍ಗೆ ಒಳಪಡಿಸಲಾಗಿದೆ.
ಜಿಲ್ಲಾವಾರು ಹಂಚಿಕೆಯಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1,245 ಪ್ರಕರಣಗಳು ಇದ್ದರೆ, ಬೆಳಗಾವಿ 517, ಕಲಬುರಗಿ 269, ವಿಜಯಪುರ 213 ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಕರಣಗಳು ಸೇರಿವೆ. ಕರ್ನಾಟಕದ ಹೊರಗಿನಿಂದಲೂ 36 ಪ್ರಕರಣಗಳು ವರದಿಯಾಗಿದ್ದು, 347 ಪ್ರಕರಣಗಳು ಇನ್ನೂ ಸ್ಪಷ್ಟ ಗುರುತುಪಡಿಸಬೇಕಾಗಿದೆ.
ಇದಲ್ಲದೆ, 937ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸರ್ಕಾರವೇ ಪಕ್ಷವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಸಹಕಾರಕ್ಕಾಗಿ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಮಾತನಾಡಿ, ಈ ವಿಶೇಷ ಲೋಕ ಅದಾಲತ್ ಜನರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ನ್ಯಾಯ ದೊರಕಿಸಿಕೊಡುವ ಅಪರೂಪದ ಅವಕಾಶವಾಗಿದ್ದು, ಉಭಯಪಕ್ಷಗಳ ನಡುವೆ ಸೌಹಾರ್ದತೆಯನ್ನು ಕಾಪಾಡಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಆಸಕ್ತರು ಮೇ 31, 2026ರೊಳಗೆ ಸುಪ್ರೀಂ ಕೋರ್ಟ್ ವೆಬ್‍ಸೈಟ್‍ನ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಟಿಸ್ ಪಡೆದವರು ತಮ್ಮ ಜಿಲ್ಲೆ ಅಥವಾ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಮುಂದೆ ನೇರವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ವ ಸಂಧಾನ ಸಭೆಗಳಿಗೆ ಹಾಜರಾಗುವ ಅವಕಾಶವಿದೆ.
ಈ ಕುರಿತು ನಡೆದ ವಿಡಿಯೋ ಕಾನ್ಫರೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಯಾದಗಿರಿ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಸೇರಿದಂತೆ ಅಧಿಕಾರಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.





















