
ಯಾದಗಿರಿ:ಮಾ.೧೨: ಕೇಂದ್ರ ಲೋಕಸೇವಾ ಆಯೋಗದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಯಾದಗಿರಿ ಜಿಲ್ಲೆಯ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ ನಾಲ್ವರು ಪ್ರತಿಭಾವಂತ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಭವ್ಯ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ನೀಡಲಾಯಿತು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಜಿಲ್ಲೆಯಂತಹ ಹಿಂದುಳಿದ ಪ್ರದೇಶದಿಂದ ಒಂದೇ ವರ್ಷದಲ್ಲಿ ನಾಲ್ವರು ಅಭ್ಯರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವುದು ಜಿಲ್ಲೆಯ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು.
ಈ ಸಾಧನೆಯು ಜಿಲ್ಲೆಯ ಯುವಜನತೆಗೆ ಹೊಸ ದಿಕ್ಕು ತೋರಿಸುವಂತಿದ್ದು, ಕಠಿಣ ಪರಿಶ್ರಮ, ದಿಟ್ಟ ಸಂಕಲ್ಪ ಹಾಗೂ ಸ್ಪಷ್ಟ ಗುರಿ ಇದ್ದರೆ ಯಾವುದೇ ಅಡೆತಡೆಗಳನ್ನೂ ಮೀರಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಈ ನಾಲ್ವರು ವಿದ್ಯಾರ್ಥಿಗಳು ಉತ್ತಮ ಉದಾಹರಣೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಶಿಕ್ಷಣದ ಸೌಲಭ್ಯಗಳು ಸೀಮಿತವಾಗಿದ್ದರೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವುದು ಅತ್ಯಂತ ಪ್ರಶಂಸನೀಯ ಸಂಗತಿ ಎಂದು ಸಚಿವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಯಾದಗಿರಿ ಜಿಲ್ಲೆಯಿಂದ ಒಂದೇ ವೇಳೆ ನಾಲ್ವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಇದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯ ಮೂಲವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ಶ್ರಮಿಸಿದರೆ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಬಹುದು. ಇಂತಹ ಸಾಧಕರನ್ನು ನೋಡಿ ಜಿಲ್ಲೆಯ ಯುವಕರು ಪ್ರೇರಣೆ ಪಡೆದು ದೊಡ್ಡ ಗುರಿಗಳನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾದ ಸಂದೀಪ್ ಬಾಡದ್, ನಿವೇದಿತಾ ಭಾವಿಮನಿ, ಬಸವರಾಜ ಜವಳಿ ಮತ್ತು ಚಂದ್ರಶೇಖರ ದೊರೆ ಅವರನ್ನು ಜಿಲ್ಲಾಡಳಿತ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅಭ್ಯರ್ಥಿಗಳು ಮಾತನಾಡಿ, ಜೀವನದಲ್ಲಿ ಗುರಿ ನಿಗದಿ ಮಾಡಿಕೊಂಡು ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸೂಕ್ತ ಮಾರ್ಗದರ್ಶನದಿಂದ ಯಾವುದೇ ಕನಸನ್ನೂ ನನಸಾಗಿಸಬಹುದು ಎಂದು ತಮ್ಮ ಅನುಭವ ಹಂಚಿಕೊAಡರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.






















