Home ಜಿಲ್ಲೆ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಕಟ್ಟುನಿಟ್ಟಿನ ಕ್ರಮ

ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಕಟ್ಟುನಿಟ್ಟಿನ ಕ್ರಮ

ಯಾದಗಿರಿ:ಮಾ.13: ಜಿಲ್ಲೆಯಾದ್ಯಂತ ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರಲ್ಲಿ ಜಿಲ್ಲೆಯಲ್ಲಿ ಸರಾಸರಿಗಿಂತ ಸುಮಾರು 33 ಶೇಕಡಾ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು. ಆದರೆ 2026ರಲ್ಲಿ ಈಗಾಗಲೇ ಸರಾಸರಿ 8.5 ಮಿ.ಮೀ ಮಳೆಯಾಗಬೇಕಾಗಿದ್ದರೂ 6.4 ಮಿ.ಮೀ ಮಾತ್ರ ಮಳೆಯಾಗಿ ಸುಮಾರು 25 ಶೇಕಡಾ ಕಡಿಮೆ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ತೃಪ್ತಿಕರವಾಗಿದೆ. ನಾರಾಯಣಪುರ ಜಲಾಶಯದಲ್ಲಿ 491.15 ಮೀ., ಸನ್ನತಿ ಬ್ಯಾರೇಜ್‍ನಲ್ಲಿ 373.90 ಮೀ. ಹಾಗೂ ಗುರಸುಣಗಿ ಜಲಾಶಯದಲ್ಲಿ 357.80 ಮೀ. ಮಟ್ಟದಲ್ಲಿ ನೀರು ಸಂಗ್ರಹವಿದೆ ಎಂದು ಹೇಳಿದರು.

ಇದುವರೆಗೆ ಮಾರ್ಚ್ ತಿಂಗಳಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್‍ನಲ್ಲಿ 16, ಏಪ್ರಿಲ್‍ನಲ್ಲಿ 25 ಹಾಗೂ ಮೇ ತಿಂಗಳಲ್ಲಿ 24 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳಲ್ಲಿ ನೀರು ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಭೀಮರಾಯನಗುಡಿ, ಕಕ್ಕೇರಾ ಹಾಗೂ ಸುರಪುರ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಮತ್ತು ಕೆಂಭಾವಿಯ 8 ವಾರ್ಡ್‍ಗಳಲ್ಲಿ ಪ್ರತಿದಿನ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶಹಾಪುರ, ಯಾದಗಿರಿ, ಹುಣಸಗಿ ಮತ್ತು ಗುರುಮಠಕಲ್ ಪಟ್ಟಣಗಳ ಎಲ್ಲಾ ವಾರ್ಡ್‍ಗಳಲ್ಲಿ ಹಾಗೂ ಕೆಂಭಾವಿಯ 15 ವಾರ್ಡ್‍ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಈ ವರ್ಷ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪ್ರತಿ 15 ದಿನಗಳಿಗೊಮ್ಮೆ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷೆಯಲ್ಲಿ ಯೋಗ್ಯವೆಂದು ದೃಢಪಟ್ಟ ನೀರನ್ನೇ ಸಾರ್ವಜನಿಕರಿಗೆ ಪೂರೈಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಜೊತೆಗೆ ಬಾವಿ, ಕೊಳವೆ ಬಾವಿ, ಓವರ್‍ಹೆಡ್ ಟ್ಯಾಂಕ್ ಹಾಗೂ ಆರ್‍ಒ ಪ್ಲಾಂಟ್‍ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ಈ ವರ್ಷ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 67,885 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈಗಾಗಲೇ 65,535 ಹೆಕ್ಟೇರ್ ಪ್ರದೇಶದಲ್ಲಿ (ಶೇ. 96.54) ಬಿತ್ತನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಿಸಿಗಾಳಿ ಮತ್ತು ಸಿಡಿಲು ಅವಘಡಗಳಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ ಗ್ರಾಮ ಮಟ್ಟದಲ್ಲಿ ಕಾರ್ಯಾಗಾರ, ಡಂಗೂರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದರು.

ಇದಲ್ಲದೆ ಜಿಲ್ಲೆಯಲ್ಲಿ 58 ವಾರಗಳಿಗೆ ಸಾಕಾಗುವಷ್ಟು ಜಾನುವಾರು ಮೇವಿನ ಸಂಗ್ರಹಣೆ ಇದ್ದು, ಪಶುಗಳಿಗೆ ಮೇವಿನ ಕೊರತೆ ಎದುರಾಗುವುದಿಲ್ಲಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯತ್ ಸಿಇಒ ಮಾಹಿತಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೋರ್‍ವೆಲ್‍ಗಳ ಮೇಲೆ ಅವಲಂಬನೆಯಿರುವುದರಿಂದ ಈಗಾಗಲೇ 65 ಗ್ರಾಮಗಳಲ್ಲಿ ಬೋರ್‍ವೆಲ್‍ಗಳ ಫ್ಲಷಿಂಗ್ ಹಾಗೂ ಖಾಸಗಿ ಬಾಡಿಗೆ ಬೋರ್‍ವೆಲ್ ವ್ಯವಸ್ಥೆ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಿಂದಿನ ವರ್ಷ ಸಮಸ್ಯೆ ಕಂಡುಬಂದ ಎಂಪಾಡ್, ರಸ್ತಾಪುರ, ಬೆನಕನಹಳ್ಳಿ ಹಾಗೂ ಹೊಸಕೇರಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜಿಗೆ ಹೆಲ್ಪ್‍ಲೈನ್ ಸಂಖ್ಯೆ 08473-253758 ಆರಂಭಿಸಲಾಗಿದ್ದು, ತಾಲೂಕುವಾರು 2್ಠ47 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಇದಲ್ಲದೆ ಯಾದಗಿರಿ ನಗರದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಮೈಕ್ರೋಬಯಾಲಾಜಿಕಲ್ ಲ್ಯಾಬ್ ಆರಂಭಿಸಲಾಗಿದೆ. ಓವರ್‍ಹೆಡ್ ಟ್ಯಾಂಕ್‍ಗಳ ಸ್ವಚ್ಛತೆ, ಕ್ಲೋರಿನೇಶನ್, ಚರಂಡಿಗಳ ಸ್ವಚ್ಛತೆ ಹಾಗೂ ಬೋರ್‍ವೆಲ್ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ವಿಶೇಷ ಗಮನ ಹರಿಸಲು ಸೂಚಿಸಲಾಗಿದೆ.

ಜಿಲ್ಲೆಯ 52 ಶಾಲೆಗಳ ವ್ಯಾಪ್ತಿಯಲ್ಲಿ 52 ಕುಡಿಯುವ ನೀರು ಸರಬರಾಜು ಕಾಮಗಾರಿಗಳು, 92 ಆರ್‍ಒ ಪ್ಲಾಂಟ್ ದುರಸ್ತಿ ಕಾಮಗಾರಿಗಳು ಹಾಗೂ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 338 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಲಜೀವನ್ ಮಿಷನ್ ಯೋಜನೆಯಡಿ 525 ಕಾಮಗಾರಿಗಳು ಪೂರ್ಣಗೊಂಡಿದ್ದು, ಜಲಧಾರೆ ಯೋಜನೆಯಡಿ ಸುಮಾರು 60 ಶೇಕಡಾ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸುಗೂರ್, ಡಿಯುಡಿಸಿ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.