Home ಜಿಲ್ಲೆ ಒಳಮೀಸಲಾತಿ ವಿರೋಧದ ಕಿಡಿ: ಮಾ. 25ರಂದು ಬೆಂಗಳೂರಿನಲ್ಲಿ ಮಹಾ ಹೋರಾಟ

ಒಳಮೀಸಲಾತಿ ವಿರೋಧದ ಕಿಡಿ: ಮಾ. 25ರಂದು ಬೆಂಗಳೂರಿನಲ್ಲಿ ಮಹಾ ಹೋರಾಟ

ಯಾದಗಿರಿ:ಮಾ.21: ಒಳಮೀಸಲಾತಿ ಪ್ರಶ್ನೆ ರಾಜ್ಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದು, ಇದರ ವಿರುದ್ಧ ಸಂಘಟನೆಗಳ ಆಕ್ರೋಶ ತೀವ್ರಗೊಳ್ಳುತ್ತಿದೆ. ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿದ ವರದಿ ವೈಜ್ಞಾನಿಕತೆ ಹಾಗೂ ಸಮಗ್ರ ಅಂಕಿಅಂಶಗಳ ಆಧಾರದ ಮೇಲೆ ರೂಪುಗೊಂಡಿಲ್ಲ ಎಂದು ಆರೋಪಿಸಿರುವ ಛಲವಾದಿ ಮಹಾಸಭೆ, ಬಲಗೈ ಸಮುದಾಯದ ಹಕ್ಕುಗಳಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದು ಗಂಭೀರವಾಗಿ ಎಚ್ಚರಿಸಿದೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭೆಯ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, “ಒಳಮೀಸಲಾತಿ ಎಂಬ ಹೆಸರಿನಲ್ಲಿ ಜಾತಿಗಳ ನಡುವೆ ಅಸಮತೋಲನ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ರೋಸ್ಟರ್ ವ್ಯವಸ್ಥೆಯಲ್ಲಿಯೂ ಬಲಗೈ ಪಂಗಡದವರಿಗೆ ಅನ್ಯಾಯವಾಗುತ್ತಿರುವುದು ಸ್ಪಷ್ಟವಾಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಹಿನ್ನಲೆಯಲ್ಲಿ, ಮಾರ್ಚ್ 25ರಂದು ಬೆಂಗಳೂರುನಲ್ಲಿ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಭವ್ಯ ಹಾಗೂ ಐತಿಹಾಸಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ತಕ್ಷಣವೇ ನಾಗಮೋಹನ್ ದಾಸ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ನಿಖರ ಹಾಗೂ ಸಮಗ್ರ ಜಾತಿ ಜನಗಣತಿ ಸಮೀಕ್ಷೆಯನ್ನು ಮರುನಡೆಸಬೇಕು. ಇಲ್ಲವಾದಲ್ಲಿ ಸಾಮಾಜಿಕ ನ್ಯಾಯದ ಮೂಲಭೂತ ತತ್ವಗಳಿಗೆ ಧಕ್ಕೆಯಾಗಲಿದೆ ಎಂದು ಅವರು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ರೋಸ್ಟರ್ ಪದ್ಧತಿಯ ಒಳಮೀಸಲಾತಿ ಜಾರಿಗೊಳಿಸಬಾರದು ಎಂಬುದು ನಮ್ಮ ದೃಢ ನಿಲುವು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, “ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬಲಗೈ ಸಮುದಾಯದ ಮತಗಳಿಂದಲೇ ಅಧಿಕಾರಕ್ಕೇರಿದರೂ, ಅವರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ. ಬದಲಾಗಿ ಜಾತಿಗಳ ನಡುವೆ ವಿಭಜನೆಯ ರಾಜಕಾರಣ ನಡೆಸುತ್ತಿದೆ” ಎಂದು ಕಿಡಿಕಾರಿದರು.

ಇದೇ ವೇಳೆ, ಭಾರತದ ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1ರಂದು ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ಅವರು, ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರವಿದ್ದರೂ, ಅದು ಸಮಗ್ರ ಹಾಗೂ ನಿಖರ ಅಂಕಿಅಂಶಗಳ ಆಧಾರದ ಮೇಲೆ ಮಾತ್ರ ಜಾರಿಯಾಗಬೇಕು ಎಂದು ಸ್ಪಷ್ಟ ನಿರ್ದೇಶ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಕಡೆಗಣಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದರು.

ಮಾರ್ಚ್ 25ರಂದು ನಡೆಯುವ ಈ ಮಹಾ ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯಿಂದಲೇ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಬೇಕು ಎಂದು ನಾಯಕರು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಡಾ. ಭಗವಂತ ಅನ್ವಾರ್, ಸಂಚಾಲಕ ಶ್ರೀಶೈಲ ಹೊಸ್ಮನಿ, ಉಪಾಧ್ಯಕ್ಷ ಮಾನಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಚಟ್ಟೇರಕರ್, ಕಾರ್ಯದರ್ಶಿ ಡಾ. ಗಾಳೆಪ್ಪ ಪೂಜಾರಿ, ಸಹ ಕಾರ್ಯದರ್ಶಿ ಚಂದಪ್ಪ ಮುನಿಪನೋರ, ಸಂಘಟನಾ ಕಾರ್ಯದರ್ಶಿ ಶರಣು ಎಸ್. ನಾಟೇಕಾರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.