
ಕಲಬುರಗಿ,ಜು.8: ಸಬ್ ಅರ್ಬನ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ್ದರಿಂದ ಆಟೋ ಚಾಲಕ ಗುಂಡಪ್ಪ ಗೋವಿಂದಪ್ಪ ಕುಶಾಳಕರ್ ( 26) ಎಂಬಾತನಿಗೆ 10 ವರ್ಷ ಜೈಲು ಮತ್ತು 50 ಸಾವಿರ ರೂ ದಂಡ ವಿಧಿಸಿ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
2024 ರ ಮೇ 19 ರಂದು ಆಟೋ ಚಾಲಕ ಗುಂಡಪ್ಪನು ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡಿ ಹೋಗಿ ಲಾಡ್ಜ್‍ವೊಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಸಬ್ ಅರ್ಬನ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಲ್ ಚವ್ಹಾಣ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.



























