
ನವಲಗುಂದ,ಮಾ14 : ಇಬ್ರಾಹಿಂಪುರ ರಸ್ತೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ವಾಹನದಲ್ಲಿ ಕೊಂಡೊಯ್ದು ಅದನ್ನು ಬೇರೆ ಬೇರೆ ಹಂತಗಳಲ್ಲಿ ವಿಂಗಡಣೆ ಮಾಡಿ, ಸಂಪನ್ಮೂಲವಾಗಿ, ಗೊಬ್ಬರವಾಗಿ ಪರಿವರ್ತಿಸುವ ವಿಧಾನವನ್ನು ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವೀಕ್ಷಿಸಿದರು.
ಈ ವೇಳೆ ಪುರಸಭೆ ಹಿರಿಯ ಅರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ ಬಣಗಾರ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾದ ಮಾಹಿತಿ ನೀಡಿ, ಪ್ರತಿನಿತ್ಯ ನವಲಗುಂದ ನಗರ ವ್ಯಾಪ್ತಿಯಿಂದ 10ರಿಂದ 12 ಟನ್ ಕಸ ಇಲ್ಲಿಗೆ ಬರುತ್ತಿದ್ದು ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಯಂತ್ರಗಳ ಸಹಾಯದಿಂದ ವಿಂಗಡನೆ ಮಾಡಲಾಗುತ್ತಿದೆ. ಹಸಿ ಕಸ ಬರುತ್ತಿದ್ದು ಅವುಗಳನ್ನು ಕೂಡ ವ್ಯವಸ್ಥಿತವಾಗಿ ಬೇರ್ಪಡಿಸಿ, 45 ದಿನಗಳ ಕಾಲ ವೈಜ್ಞಾನಿಕ ಮಾದರಿಯಲ್ಲಿ ಇರಿಸಿ ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ.
ಪುರಸಭೆ ಸ್ವತಂತ್ರ್ಯವಾಗಿ ಇಷ್ಟೊಂದು ದೊಡ್ಡ ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಕಸವನ್ನು ಬೇರೆ ಬೇರೆಯಾಗಿ ವಿಂಗಡಿಸಿ ಮರುಬಳಕೆಯಾಗುವ ಕಸವನ್ನು ಪ್ರತ್ಯೇಕಿಸಿ ಮಾರಾಟಕ್ಕೆ ಸಜ್ಜುಗೊಳಿಸುವುದು. ತ್ಯಾಜ್ಯವನ್ನು ಕೂಡಾ ವ್ಯವಸ್ಥಿತ ಮಾದರಿಯಲ್ಲಿ ವಿಲೇ ಮಾಡುವುದು, ಹಸಿ ಕಸವನ್ನು ಪ್ಲಾಸ್ಟಿಕ್ ಇತ್ಯಾದಿ ಕರಗದ ವಸ್ತುಗಳಿಂದ ವಿಭಜಿಸಿ 45 ದಿನಗಳ ಕಾಲ ಇರಿಸಿ ಒಣಗಿದ ಬಳಿಕ ಬಳಕೆ ಮಾಡಲು ಒದಗಿಸುವುದು.
ದೊಡ್ಡ ಮಟ್ಟದಲ್ಲಿ ನಿತ್ಯವೂ ಕಸ ಸಂಗ್ರಹವಾಗುವುದರಿಂದ ಕಸದ ವಿಂಗಡಣೆಗೆ ಯಾಂತ್ರೀಕೃತ ವ್ಯವಸ್ಥೆ ಮಾಡಿಕೊಂಡಿದ್ದು, ಜೆಸಿಬಿ ಸೇರಿದಂತೆ ಬೇರೆ ಬೇರೆ ರೀತಿಯ ಯಂತ್ರಗಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ವಿವರಿಸಿದರು.
ನಂತರ ಮಾತನಾಡಿದ ಅವರು ಸ್ವಚ್ಛತೆ, ತ್ಯಾಜ್ಯ ವಿಲೇವಾರಿಯ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿಕೊಳ್ಳಬೇಕು. ಸುಂದರ ನಗರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗುತ್ತದೆ ಎಂದರು.
ಅರೋಗ್ಯ ನಿರೀಕ್ಷಕಿ ಸಾವಿತ್ರಿ ಮುಶನ್ನವರ, ಅನೀಲ ಜೋಶಿ, ಸೇರಿ ಪುರಸಭೆ ಪೌರ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು






















